ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನ್ಯ ಭಾಷೆ ವ್ಯಾಮೋಹಕ್ಕೆ ಕಡಿವಾಣ ಹಾಕ್ಬೇಕು: ಚಂದ್ರು (Chandru | Kannada Pradhikara | Gadag | Karnataka)
Bookmark and Share Feedback Print
 
ಪ್ರತಿ ಹದಿನೈದು ದಿನಕ್ಕೊಂದರಂತೆ ಭಾಷೆ ನಶಿಸುತ್ತಿರುವ ಆತಂಕದ ವಿಷಯವನ್ನು ಯುನೆಸ್ಕೊ ನಡೆಸಿದ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದ್ದು, ಇದರ ಭೀತಿ ಕರ್ನಾಟಕಕ್ಕೆ ಹೆಚ್ಚಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಳವಳ ವ್ಯಕ್ತ ಪಡಿಸಿದರು.

ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ನುಡಿತೇರು ಮತ್ತು ತಿರುಳ್ಗನ್ನಡ ನುಡಿ ಸೊಗಡು ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದಲ್ಲಿ, ಅದಕ್ಕೂ ಪ್ರಮುಖವಾಗಿ ರಾಜ್ಯದಲ್ಲಿ ಕನ್ನಡ ಸಂಸ್ಕೃತಿಯ ಒಳಹುಟ್ಟುಗಳೊಂದಿಗೆ ಸಮ್ಮಿಲಿತವಾಗಿರುವ ಸಾಕಷ್ಟು ಅನ್ಯ ಭಾಷೆಗಳಿವೆ. ಯುನೆಸ್ಕೊ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೆಚ್ಚಿನ ಹಾನಿ ಕರ್ನಾಟಕಕ್ಕೆ ಆಗಲಿದೆ ಎಂಬುದು ತಿಳಿದು ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾನೂನಿನಿಂದ ಕನ್ನಡವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಅದು ಕನ್ನಡ ಪ್ರೇಮದ ಮನಸ್ಸಿನಿಂದ ಉದ್ಭವವಾಗಬೇಕು. ಕನ್ನಡ ನಾಡು, ನುಡಿ ಸಂಸ್ಕೃತಿಯ ಆಳ ಮಹತ್ವ ತಿಳಿಸುವ ಮೂಲಕ ಜನರ ಮನಗೆಲ್ಲುವ ಕೆಲಸವಾಗಬೇಕಿದೆ. ತನ್ಮೂಲಕ ಅನ್ಯ ಭಾಷೆಯ ವ್ಯಾಮೋಹಕ್ಕೆ ಕಡಿವಾಣ ಹಾಕಿ ಮಾತೃಭಾಷೆಗೆ ಮನ್ನಣೆ ನೀಡುವಂತೆ ಜಾಗೃತಿ ಮೂಡಿಸಬೇಕಿದೆ.

ಆಂಗ್ಲ ಭಾಷೆ ವ್ಯಾಮೋಹದಿಂದ ಕನ್ನಡ ಭಾಷೆಗೆ, ಬದುಕಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ದಿಸೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಭಾವನೆ ಎಲ್ಲರ ಮನದಲ್ಲಿ ಬಿತ್ತಿ ನಮ್ಮತನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ. ಕನ್ನಡ ಕಲಿತವರೆಲ್ಲ ಕನ್ನಡಿಗರು ಎಂಬ ವ್ಯಾಖ್ಯಾನ ಮಾಡಬೇಕಲ್ಲದೇ, ಕನ್ನಡ ಕಲಿಯುವ ವಾತಾವರಣ ನಿರ್ಮಾಣವಾಗಬೇಕಿದೆ. ನಾಡು, ನುಡಿ, ಗಡಿಯ ವಿಷಯ ಬಂದಾಗ ಕನ್ನಡಿಗರೆಲ್ಲ ಒಂದಾಗಬೇಕು. ನಾವು ಗಟ್ಟಿ ಧೋರಣೆ ತೋರದಿದ್ದಲ್ಲಿ ಪರ ಭಾಷಿಯರು ನಮ್ಮ ನೆಲದಲ್ಲಿ ಬಲಿಷ್ಠರಾಗುತ್ತಾ ಹೋಗುತ್ತಾರೆಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ