ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೊನ್ನಾಳಿ ಮತದಾರರ ಪಾಲಿಗೆ ಖಳನಾಯಕನಾದ ರೇಣುಕಾಚಾರ್ಯ! (Renukacharya | Honnali | BJP | Yeddyurappa | Congress | JDS)
Bookmark and Share Feedback Print
 
ಆಡಳಿತಾರೂಢ ಬಿಜೆಪಿ ಸರಕಾರವನ್ನು ಸಂಕಟಕ್ಕೆ ಗುರಿ ಮಾಡಿದ ಅಪಕೀರ್ತಿಗೆ ಪಾತ್ರರಾದ ಅಬಕಾರಿ ಸಚಿವ ರೇಣುಕಾಚಾರ್ಯ ಇದೀಗ ತವರು ಕ್ಷೇತ್ರವಾದ ಹೊನ್ನಾಳಿ ಮತದಾರರ ಪಾಲಿಗೆ ಖಳನಾಯಕರಂತೆ ಗೋಚರಿಸುತ್ತಿದ್ದಾರೆ.

ಎರಡೂ ಬಾರಿ ವಿಶ್ವಾಸಮತ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸಿದ್ದರೂ ಇತ್ತೀಚೆಗೆ ಅವರು ನಡೆದುಕೊಂಡ ರೀತಿ ಸಾರ್ವತ್ರಿಕ ಟೀಕೆಗೆ ಗುರಿಯಾಗಿದೆ. ಸುಗಮ ಆಡಳಿತದ ಮಧ್ಯೆಯೂ ಸಂಘಟಿಸಿದ ಭಿನ್ನರ ಸಭೆಗಳ ಪರಿಣಾಮ ಸರಕಾರ ಎರಡು ಬಾರಿ ಅಗ್ನಿಪರೀಕ್ಷೆ ಎದುರಿಸಬೇಕಾಗಿ ಬಂದಿತು. ಇಷ್ಟೆಲ್ಲ ರಾದ್ದಾಂತಕ್ಕೆ ಇವರೇ ಸೂತ್ರಧಾರ ಎಂಬುದು ಹೊನ್ನಾಳಿ ಮತದಾರರ ಆಕ್ರೋಶ.

ನರ್ಸ್ ಜಯಲಕ್ಷ್ಮಿ ಪ್ರಕರಣದಲ್ಲಿ ರೇಣುಕಾಚಾರ್ಯ ಹೆಸರು ಕೆಡಿಸಿಕೊಂಡರೂ ಹೊನ್ನಾಳಿ ಜನತೆ ಕ್ಷಮಿಸಿದ್ದರು. ಸತತ ಎರಡನೇ ಬಾರಿಗೆ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳುಹಿಸಿದ್ದರು. ಅದೃಷ್ಟ ಎಂಬಂತೆ ಬಿಜೆಪಿ ಸರಕಾರವೂ ಅಸ್ತಿತ್ವಕ್ಕೆ ಬಂದಿತು. ಮೊದಲಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷತೆ ಒಲಿಯಿತು. ನಂತರ ಬಂಡಾಯದ ಕಹಳೆ ಮೊಳಗಿಸಿ ಅಬಕಾರಿ ಸಚಿವ ಖಾತೆಯನ್ನೂ ದಕ್ಕಿಸಿಕೊಂಡರು.

ವಿಶೇಷ ಅಂದ್ರೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇವರ ಬೆನ್ನಿಗಿದ್ದರು. ಹೆಚ್ಚು ಕಡಿಮೆ ತಮ್ಮ ನೆರಳಂತೆ ಇಟ್ಟುಕೊಂಡಿದ್ದರು. ಅನುದಾನಕ್ಕೆ ಕೊರತೆ ಇರಲಿಲ್ಲ. ಇಷ್ಟೆಲ್ಲ ಇದ್ದ ಮೇಲೂ ಇನ್ನೂ ಏನು ಬೇಕಿತ್ತು? ಖಾತೆಗೆ ಸಂಬಂಧಿಸಿದ ಕೆಲಸ ಮಾಡಿಕೊಂಡು ಕ್ಷೇತ್ರಕ್ಕೂ ನ್ಯಾಯ ಒದಗಿಸಿ ಕೆಲಸ ಮಾಡೋದು ಬಿಟ್ಟು ಬಂಡಾಯ ಸಾರಿದ್ದು ಯಾಕೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಾರೆ.

ಅಧಿಕಾರದ ಮದದಿಂದ 16 ಅತೃಪ್ತರನ್ನು ಕಟ್ಟಿಕೊಂಡು ಮುಖ್ಯಮಂತ್ರಿಗೇ ತಿರುಗೇಟು ನೀಡಲು ಹೋಗಿದ್ದು ಸರಿಯೇ? ಈ ಮೊದಲು ರೆಡ್ಡಿ ಬಳಗ ಸೇರಿ ಹೈದರಾಬಾದಿಗೆ ಹಾರಿದ್ದರು. ಬದಲಾದ ಸನ್ನಿವೇಶದಲ್ಲಿ ಜನ ಕೂಡ ಅದನ್ನು ಮರೆತುಬಿಟ್ಟಿದ್ದರು. ಮತ್ತೆ ಹಳೇ ಚಾಳಿ ಮುಂದುವರಿಸಿದ್ದು ಕ್ಷಮಾರ್ಹವಾದ ನಡವಳಿಕೆ ಅಲ್ಲ ಎಂಬ ಆಕ್ರೋಶ ಹೊನ್ನಾಳಿ ಜನರದ್ದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ