ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ದೂರವಾಣಿ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಂತರ ತೀವ್ರ ಶೋಧದ ನಂತರ ಇದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಎಂಜಿ ರಸ್ತೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ. ನಂತರ ಕಮಿಷನರ್ ಕಚೇರಿಯಲ್ಲೇ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ಪತ್ತೆ ದಳ, ಶ್ವಾನದಳದ ಮೂಲಕ ತಪಾಸಣೆ ನಡೆಸಿದಾಗ ಇದು ಹುಸಿ ಬೆದರಿಕೆ ಕರೆ ಎಂದು ಗೊತ್ತಾಯಿತು.
ಇದೀಗ ಕಿಡಿಗೇಡಿಗಳಿಂದ ಬಂದ ದೂರವಾಣಿ ಕರೆ ಮತ್ತು ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಸುವ ಕರೆ ಇದಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಆರೋಪಿಯನ್ನು ಸೆರೆ ಹಿಡಿಯುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.