ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಹಣಬಲದಿಂದ ಸಂಚು ರೂಪಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಗಂಭೀರವಾಗಿ ಆರೋಪಿಸಿದ್ದು, ಇದರ ಹಿಂದೆ ಗಣಿ ಲಾಬಿ ಇದ್ದು ಈ ಸಂಚಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಣಿಧಣಿಗಳ ಜೊತೆ ಶಾಮೀಲಾಗಿರುವುದಾಗಿಯೂ ದೂರಿದರು.
ಧಾರವಾಡಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರವನ್ನು ಪತನಗೊಳಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಚಲುವರಾಯ ಸ್ವಾಮಿ ಗಣಿಧಣಿಗಳ (ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಕಲಘಟಗಿ ಶಾಸಕ ಸಂತೋಷ್ ಲಾಡ್) ಜತೆ ಶಾಮೀಲಾಗಿ ಷಡ್ಯಂತ್ರ ರೂಪಿಸಿದ್ದರು ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಬೊಬ್ಬೆಹೊಡೆಯುತ್ತಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳೇ ಇದೀಗ ಬಿಜೆಪಿ ಸರಕಾರ ಅದಿರು ರಫ್ತು ನಿಷೇಧಿಸಿದ ನಂತರ ಸರಕಾರವನ್ನೇ ಉರುಳಿಸಲು ಮುಂದಾಗಿದೆ ಎಂದರು. ಕಳ್ಳತನಕ್ಕೆ ಪ್ರಚೋದನೆ ಕೊಡುವುದು ಕೂಡ ತಪ್ಪ ಎಂದ ಆಚಾರ್ಯ ಆ ನಿಟ್ಟಿನಲ್ಲಿ ಕುಮಾರಸ್ವಾಮಿ ಗಣಿಧಣಿಗಳ ಜೊತೆ ಶಾಮೀಲಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದರು.
ಗಣಿಧಣಿಗಳ ಹಣಬಲದಿಂದ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್, ಜೆಡಿಎಸ್ ಸಾಕಷ್ಟು ಪ್ರಯತ್ನ ನಡೆಸಿದರೂ ಕೂಡ ಅದು ಫಲ ಕೊಟ್ಟಿಲ್ಲ. ಇನ್ನು ಮುಂದೆಯೂ ಪ್ರತಿಪಕ್ಷಗಳ ಸಂಚು ಫಲ ನೀಡುವುದಿಲ್ಲ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಗೋಮುಖ ವ್ಯಾಘ್ರ-ಈಶ್ವರಪ್ಪ: ಆಡಳಿತಾರೂಢ ಬಿಜೆಪಿ ಸರಕಾರವನ್ನು ಉರುಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂಡವಾಳ ಬಯಲಾಗಿದೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕುಮಾರಸ್ವಾಮಿ ಗೋಮುಖ ವ್ಯಾಘ್ರ ಎಂಬುದು ಇದೀಗ ಜಗಜ್ಜಾಹೀರಾಗಿದೆ ಎಂದರು.
ಸರಕಾರವನ್ನು ಉರುಳಿಸಲು ಸಾಕಷ್ಟು ಷಡ್ಯಂತ್ರ ನಡೆಸಿ ಆಯ್ತು, ಆ ನಿಟ್ಟಿನಲ್ಲಿ ಇನ್ನಾದ್ರೂ ಪ್ರತಿಪಕ್ಷಗಳು ಸೋಲು ಒಪ್ಪಿಕೊಂಡು, ಸರಕಾರದ ಅಭಿವೃದ್ಧಿ ಕೆಲಸದಲ್ಲಿ ಕೈಜೋಡಿಸಲಿ ಎಂದು ಸಲಹೆ ನೀಡಿದರು. ಅನಾವಶ್ಯಕ ತಿರುಕನ ಕನಸು ಕಾಣುತ್ತ, ಸರಕಾರ ಬೀಳಿಸಿ ಅಧಿಕಾರದ ಗದ್ದುಗೆ ಏರುವ ಆಸೆ ಕೈಗೂಡುವುದಿಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಅಲ್ಲದೇ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪ್ರತಿಪಕ್ಷದ ಏಜೆಂಟ್ ತರ ವರ್ತಿಸುತ್ತಿರುವುದು ಅವರ ಘನತೆಗೆ ಶೋಭೆಯಲ್ಲ ಎಂದು ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.