ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಕೇವಲ ಎರಡು ಮತಗಳ ಅಂತರದಿಂದ ಬಹುಮತ ಸಾಧಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದ ಕೌಂಟ್‌ಡೌನ್ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಎನ್.ಧರ್ಮಸಿಂಗ್ ಹೇಳಿದ್ದಾರೆ.
ಯಡಿಯೂರಪ್ಪ ಜಯ ಶಾಶ್ವತವಲ್ಲ, ಹೈಕೋರ್ಟ್ ತೀರ್ಪು ಹೊರಬಂದ ನಂತರ ಬಿಜೆಪಿ ಸರಕಾರದ ನಿಜ ಬಣ್ಣ ಬಯಲಾಗಲಿದೆ ಎಂದು ವ್ಯಂಗವಾಡಿದ್ದಾರೆ.
ಬಿಜೆಪಿ ಪಕ್ಷದ ಶಾಸಕರ ಹಾಗೂ ಸಚಿವರ ವಿಶ್ವಾಸವನ್ನು ಕಳೆದುಕೊಂಡಿರುವ ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರಿಯುವುದು ಅಸಾಧ್ಯ. ಹೈಕೋರ್ಟ್ ತೀರ್ಪು ಬರುವವರೆಗೆ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ .ಅವರೊಬ್ಬ ತಾತ್ಕಾಲಿಕ ಮುಖ್ಯಮಂತ್ರಿ ಎಂದು ಚಟಾಕಿ ಹಾರಿಸಿದರು.
ರಾಜ್ಯದ ಅಭಿವೃದ್ಧಿಯತ್ತ ಗಮನ ನೀಡದೆ ಕೇವಲ ಹಗರಣಗಳಲ್ಲಿ ಭಾಗಿಯಾಗಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿ, ರಾಜ್ಯದ ಜನತೆಯ ಮಾನ ಮರ್ಯಾದೆಗಳನ್ನು ಹರಾಜು ಹಾಕುತ್ತಿದೆ ಎಂದು ಟೀಕಿಸಿದರು.
ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿ ಸರಕಾರ ನಡೆಸಿಕೊಂಡ ರೀತಿಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಅಧಿಕಾರ ಪಡೆಯಲು ಪೊಲೀಸರನ್ನು ಅವಲಂಭಿಸಿರುವುದು ಅವರ ಯೋಗ್ಯತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.