ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಮಾರಸ್ವಾಮಿ ಒಬ್ಬ ಗೋಮುಖ ವ್ಯಾಘ್ರ: ಈಶ್ವರಪ್ಪ ಟೀಕೆ (HD Kumaraswamy | KS Eshwarappa | Congress | BJP)
Bookmark and Share Feedback Print
 
ಎಚ್.ಡಿ. ಕುಮಾರಸ್ವಾಮಿ ಏನೆಂಬುದು ಅವರು ಮುಖ್ಯಮಂತ್ರಿಯಾದ ನಂತರದ ಜನತೆಗೆ ತಿಳಿದಿದೆ. ಅವರಂದುಕೊಂಡಂತೆ ಮಾಜಿ ಮುಖ್ಯಮಂತ್ರಿಯನ್ನು ಜನತೆ ಗೋವು ಎಂದು ಪರಿಗಣಿಸಿಲ್ಲ, ಅವರು ಗೋಮುಖ ವ್ಯಾಘ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕುಮಾರಸ್ವಾಮಿ ತನ್ನನ್ನು ತಾನು ಗೋವು ಎಂದು ಭಾವಿಸಿಕೊಂಡಿದ್ದಾರೆ. ಆದರೆ ಅವರು ಏನೆಂಬುದು ಜನತೆಗೆ ಯಾವತ್ತೋ ತಿಳಿದು ಹೋಗಿದೆ. ಈಗ ಮತ್ತೆ ಸರಕಾರವನ್ನು ಅಸ್ಥಿರಗೊಳಿಸಿ ಕುರ್ಚಿಯ ಆಸೆಯಲ್ಲಿದ್ದಾರೆ. ಅದು ಯಾವುದೇ ಕಾರಣಕ್ಕೂ ಯಶಸ್ವಿಯಾಗದು ಎಂದರು.

ನಮ್ಮ ಪಕ್ಷದ ಶಾಸಕರಿಗೆ ಬಿಜೆಪಿ ಯಾವುದೇ ಆಮಿಷ ಒಡ್ಡಿಲ್ಲ. ಗೂಂಡಾಗಿರಿಯನ್ನೂ ಮಾಡಿಲ್ಲ. ಜೆಡಿಎಸ್ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ಮಾಡುತ್ತಿರುವ ಕೃತ್ಯಗಳನ್ನು ನಮ್ಮ ತಲೆ ಮೇಲೆ ಹಾಕುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

ನಿಜವಾಗಿ ಬಿಜೆಪಿ ಶಾಸಕರನ್ನು ಆಮಿಷಗಳ ಮೂಲಕ ಸೆಳೆಯಲು ಯತ್ನಿಸಿದ್ದು ಕುಮಾರಸ್ವಾಮಿ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ. ತಮ್ಮ ತಂತ್ರ ವಿಫಲವಾಗುತ್ತಿದ್ದಂತೆ ಅವರು ಬಿಜೆಪಿಯತ್ತ ಬೆಟ್ಟು ಮಾಡಿದರು. ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಿ. ಮುಖ್ಯಮಂತ್ರಿಯಾಗುವ ಕನಸನ್ನು ಬಿಡಿ ಎಂದು ಸಲಹೆ ನೀಡಿದರು.

ನೀವು ಮುಖ್ಯಮಂತ್ರಿಯಾಗುವುದು ಬಿಡಿ, ವಿರೋಧ ಪಕ್ಷದ ನಾಯಕರಾಗಲೂ ಅನರ್ಹರು. ನಿಮಗೆ ಜನರ ಸಮಸ್ಯೆಗಳು ಬೇಡವಾಗಿದೆ. ಜನರಿಂದ ಆಯ್ಕೆಯಾದ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತೀರಿ. ಇದುವರೆಗೂ ಯಾವುದೇ ಅಧಿವೇಶನಗಳನ್ನು ಸರಿಯಾಗಿ ನಡೆಯಲು ಬಿಟ್ಟಿಲ್ಲ. ಗದ್ದಲಗಳಲ್ಲೇ ಕಾಲಹರಣ ಮಾಡಿದ್ದೀರಿ. ನಿಮಗೆ ಜನತೆಯೇ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇಷ್ಟಾದ ಮೇಲೆಯೂ ಪ್ರತಿಪಕ್ಷಗಳು ಯಾಕೆ ಸೋಲೊಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎರಡನೇ ಬಾರಿಯೂ ಬಹುಮತ ಸಾಬೀತುಪಡಿಸಿದ್ದಾರೆ; ಇನ್ನಾದರೂ ಸುಸೂತ್ರವಾಗಿ ಸರಕಾರವನ್ನು ನಡೆಯಲು ಬಿಡಿ ಎಂದರು.

ಇದು ಸೆಮಿಫೈನಲ್, ಫೈನಲ್ ಇನ್ನೂ ಬಾಕಿ ಇದೆ. ಇದು ತಾತ್ಕಾಲಿಕ ಜಯ, ಮುಂದಿನ ದಿನಗಳನ್ನು ಕಾದು ನೋಡಿ. ಬಿಜೆಪಿ ಸರಕಾರ ಪತನ ಖಚಿತ ಮುಂತಾದ ಮಾತುಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಯಥಾ ಪ್ರಕಾರವಾಗಿ ಮುಂದುವರಿಸಿವೆ. ಅವರ ಧೋರಣೆಗಳೇ ಸರಿಯಿಲ್ಲ. ತಮ್ಮ ಸೋಲನ್ನು ಒಪ್ಪಿಕೊಳ್ಳದೇ ಇದ್ದಲ್ಲಿ, ಮುಂದೆ ಜನತೆಯ ಎದುರು ಚಿಕ್ಕವರಾಗುವ ಸರದಿ ನಿಮ್ಮದಾಗಲಿದೆ ಎಂದು ಈಶ್ವರಪ್ಪ ಮತ್ತೊಮ್ಮೆ ಎಚ್ಚರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ