ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಂದು ಗೌಡರು ಹಾಕಿದ ಕಣ್ಣೀರಿಗೂ ಅಶ್ವಥ್ ಬೆಲೆ ಕೊಡಲಿಲ್ಲ (Channapatna | CP Yogeshwar | MC Ashwath | BJP)
Bookmark and Share Feedback Print
 
ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್ ಅವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆದುಕೊಂಡ ನಂತರ ನಡೆದ ಚುನಾವಣೆಯಲ್ಲಿ ಗೆದ್ದ ಎಂ.ಸಿ. ಅಶ್ವಥ್ ಅವರನ್ನು ಬಿಜೆಪಿ ಬಗಲಿಗೆ ಹಾಕಿಕೊಳ್ಳುವುದರೊಂದಿಗೆ ಚನ್ನಪಟ್ಟಣದಲ್ಲಿ ಕೇವಲ ಮೂರು ವರ್ಷದೊಳಗೆ ಮೂರನೇ ಚುನಾವಣೆ ನಡೆಯುವಂತಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇನ್ನು ನಡೆಯಬೇಕಾಗಿರುವುದು ಎರಡನೇ ಉಪ ಚುನಾವಣೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯೋಗೇಶ್ವರ್ ಆಯ್ಕೆಯಾಗಿದ್ದರು. ಅವರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೆಳೆದುಕೊಂಡು ಕಣಕ್ಕಿಳಿಸಲಾಯಿತಾದರೂ, ಗೆಲ್ಲುವ ಸರದಿ ಅವರದ್ದಾಗಿರಲಿಲ್ಲ.

ಆ ಚುನಾವಣೆಯಲ್ಲಿ ಗೆದ್ದದ್ದು ಎಂ.ಸಿ. ಅಶ್ವತ್ಥ್. ಈ ಹಿಂದೆ ಮೂರು ಬಾರಿ ಸತತವಾಗಿ ಜೆಡಿಎಸ್‌ನಿಂದ ಸೋತ ಅಭ್ಯರ್ಥಿಯಾಗಿದ್ದವರು ಅವರು. ಈ ಗೆಲುವಿಗೆ ಕಾರಣ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.

ಅಂದು ದೇವೇಗೌಡರು ಹಾಕಿದ ಕಣ್ಣೀರಿಗೆ ಮನಸೋತ ಚನ್ನಪಟ್ಟಣ ಮತದಾರರು ಸೋತಿದ್ದರು. ಗೌಡರು ಚುನಾವಣಾ ಪ್ರಚಾರ ಸಭೆಗಳಲ್ಲಿ ಬಹಿರಂಗವಾಗಿ ಕಣ್ಣೀರು ಹಾಕಿದ್ದರು. ಅಶ್ವಥ್ ಅವರನ್ನು ಗೆಲ್ಲಿಸುವಂತೆ ಜನತೆಯಲ್ಲಿ ಗೋಗರೆದಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಪಿ.ಜಿ.ಆರ್. ಸಿಂಧ್ಯಾ ಕೂಡ ಇಲ್ಲಿ ಅವಿರತ ಶ್ರಮ ವಹಿಸಿದ್ದರು.

ಇಷ್ಟೆಲ್ಲ ಬೆಂಬಲ ಪಡೆದು ಜನರಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಅಶ್ವಥ್ ಕೂಡ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ. ಈಗಾಗಲೇ ಅವರು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂತ್ರಿಯಾಗುವ ಅಭಿಲಾಷೆ ಅವರದ್ದು. ಈ ಭರವಸೆಯನ್ನೂ ಬಿಜೆಪಿ ಅವರಿಗೆ ನೀಡಿದೆ.

ಇನ್ನಿಲ್ಲಿ ಗೆಲ್ಲೋದು ಯಾರು?
ಈ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಅಭ್ಯರ್ಥಿಗಳು ಬಿಜೆಪಿಗೆ ಬಂದಾಗಿದೆ. ಹಾಗಾಗಿ ಪ್ರತಿಪಕ್ಷಗಳ ಅಸ್ತ್ರವನ್ನು ಬಿಜೆಪಿ ಉಪಾಯದಿಂದ ಕಸಿದುಕೊಂಡಿದೆ.

ಆದರೂ ಮೂಲಗಳ ಪ್ರಕಾರ ಇಲ್ಲಿ ಕಣಕ್ಕಿಳಿಯುವುದು ಯೋಗೇಶ್ವರ್. ಅಶ್ವಥ್ ಬಿಜೆಪಿ ಬರಲಿರುವುದು ಹೌದಾದರೂ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದಂತಿಲ್ಲ.

ಅತ್ತ ಕಾಂಗ್ರೆಸ್-ಜೆಡಿಎಸ್‌ಗಳು ತಲೆ ಮೇಲೆ ಕೈ ಹೊತ್ತು ಕೂತಿವೆ. ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನೇ ಇಲ್ಲದಂತೆ ಮಾಡಿರುವ ಬಿಜೆಪಿಗೆ ತಿರುಮಂತ್ರ ಹಾಕಲು ದಾರಿಗಳನ್ನು ಹುಡುಕುತ್ತಿವೆ.

ಒಟ್ಟಾರೆ ಪರಿಸ್ಥಿತಿ ಅವಲೋಕನ ನಡೆಸಿದಾಗ ಇಲ್ಲಿ ಎದ್ದು ಕಾಣುವ ಒಂದೇ ಒಂದು ಮುಖವೆಂದರೆ ಯೋಗೇಶ್ವರ್. ಹಾಗಾಗಿ ಅವರನ್ನು ಮಾತೃಪಕ್ಷಕ್ಕೆ ಸೆಳೆಯುವ ಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಜತೆಗೆ ಜೆಡಿಎಸ್ ಕೂಡ ಇದೇ ಯತ್ನದಲ್ಲಿರುವುದು ಅಚ್ಚರಿ ಮೂಡಿಸಿದೆ.

ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿ.ಕೆ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿ ಮುಖ ಮೂತಿ ಜಜ್ಜಿಸಿಕೊಂಡಿತ್ತು. ಹಾಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡುವುದು ಹಲವರಿಗೆ ಇಷ್ಟವಿಲ್ಲ. ಹಾಗಾಗಿ ಪರ್ಯಾಯ ಮಾರ್ಗಗಳಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ. ಅದರಲ್ಲಿ ಮೊದಲನೆಯದ್ದು ಸಿ.ಪಿ. ಯೋಗೇಶ್ವರ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳುವುದು.

ಈ ಬಗ್ಗೆ ಇದುವರೆಗೆ ಯೋಗೇಶ್ವರ್ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ರಾಜ್ಯ ರಾಜಕೀಯದಲ್ಲಿ ಡೀಲಿಂಗ್‌ಗಳು ಮಹತ್ವದ ಪಾತ್ರ ವಹಿಸುತ್ತಿರುವುದರಿಂದ ನಾಳೆಯ ದಿನ ಯಾವ ಪಕ್ಷಕ್ಕೆ ಹೋದರೂ ಯಾರು ಕೂಡ ಅಚ್ಚರಿ ಪಡಬೇಕಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ