ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎರಡೆರಡು ಬಾರಿ ವಿಶ್ವಾಸ ಮತ ಗೆದ್ದು ಬೀಗುತ್ತಿರುವ ಹೊತ್ತಿನಲ್ಲೇ ಸೋಮವಾರ ಹೈಕೋರ್ಟ್ ಬಿಜೆಪಿ ಬಂಡಾಯ ಶಾಸಕರ ಅನರ್ಹತೆ ಕುರಿತ ತೀರ್ಪು ರಾಜಕೀಯ ವಲಯದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ನಿರೀಕ್ಷೆಗಳಿವೆ.
ಬಿಜೆಪಿ ಸರಕಾರದ ವಿರುದ್ಧ ಬಂಡೆದ್ದು ಬೆಂಬಲ ಹಿಂದಕ್ಕೆ ಪಡೆದುಕೊಂಡ ಬಳಿಕ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಂದ ಅನರ್ಹಗೊಂಡಿದ್ದ 11 ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ಮುಗಿಸಿರುವ ನ್ಯಾಯಾಲಯವು ಸೋಮವಾರಕ್ಕೆ ತೀರ್ಪು ಕಾದಿರಿಸಿತ್ತು.
ರಾಜ್ಯಪಾಲರ ಸೂಚನೆ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವ ಅನಿವಾರ್ಯತೆಗೆ ಬಿದ್ದಿದ್ದ ಬಿಜೆಪಿ ಸರಕಾರವು, ಬಂಡೆದ್ದ 16 ಶಾಸಕರನ್ನು ಅನರ್ಹಗೊಳಿಸಿತ್ತು. ಇದು ಅಸಿಂಧು ಎನ್ನುವುದು ಬಂಡಾಯ ಶಾಸಕರು ಮತ್ತು ಪ್ರತಿಪಕ್ಷಗಳ ವಾದ.
ಅಕ್ಟೋಬರ್ 14ರಂದು ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚಿಸಿದ ಸಂದರ್ಭದಲ್ಲಿ ಸರಕಾರದ ಪರ 106 ಮತಗಳು ಬಿದ್ದಿದ್ದವು. ಇದರಲ್ಲಿ ಬಿಜೆಪಿಯ 105 ಹಾಗೂ ಪಕ್ಷೇತರ ವರ್ತೂರು ಪ್ರಕಾಶ್ ಅವರ ಬೆಂಬಲವಿತ್ತು. ಆದರೆ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಕಲಾಪದಿಂದ ದೂರ ಉಳಿದಿದ್ದರು. ಕಾಂಗ್ರೆಸ್‌ನ 73 ಹಾಗೂ ಜೆಡಿಎಸ್‌ನ 27 ಮತಗಳೊಂದಿಗೆ ಸರಕಾರದ ವಿರುದ್ಧ 100 ಮತಗಳು ಬಿದ್ದಿದ್ದವು.
ಮುಂದೂಡಲ್ಪಟ್ಟಿರುವ ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣವೂ ಸೋಮವಾರ ವಿಚಾರಣೆಗೆ ಬರಲಿದೆ. ತಿದ್ದುಪಡಿ ಮಾಡಲ್ಪಟ್ಟ ಅರ್ಜಿಯನ್ನು ವಿಚಾರಣೆ ನಡೆಸಲಿರುವ ನ್ಯಾಯಾಲಯ ವಾರಾಂತ್ಯದಲ್ಲಿ ಈ ಕುರಿತ ತೀರ್ಪನ್ನು ನೀಡುವ ಸಾಧ್ಯತೆಗಳಿವೆ.
ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಡಿ. ಸುಧಾಕರ್, ಶಿವರಾಜ ತಂಗಡಗಿ ಮತ್ತು ಗೂಳಿಹಟ್ಟಿ ಶೇಖರ್ ಅವರನ್ನು ಕೂಡ ಸ್ಪೀಕರ್ ಅನರ್ಹಗೊಳಿಸಿದ್ದರು. ಇದರ ವಿರುದ್ಧ ಅನರ್ಹಗೊಂಡ ಪಕ್ಷೇತರ ಶಾಸಕರು ಕೂಡ ಹೈಕೋರ್ಟ್ ಮೊರೆ ಹೋಗಿದ್ದರು. ಈ ತೀರ್ಪು ಯಾರದೇ ಪರ ಬಂದರೂ ಸರಕಾರಕ್ಕೆ ಧಕ್ಕೆಯಾಗದು.
ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿರುವುದು ಸಂವಿಧಾನ ಬಾಹಿರ ಎಂದು ತೀರ್ಪು ನೀಡಿದರೆ, ಮತ್ತೊಮ್ಮೆ ವಿಶ್ವಾಸ ಮತ ಯಾಚಿಸುವುದು ಸರಕಾರಕ್ಕೆ ಅನಿವಾರ್ಯವಾಗುತ್ತದೆ. ಆಗ ಈ ಶಾಸಕರು ಸರಕಾರದ ವಿರುದ್ಧ ಮತ ಚಲಾಯಿಸುವುದು ಖಚಿತ. ಪ್ರಸಕ್ತ ಯಡಿಯೂರಪ್ಪ ಸರಕಾರವು 106 ಶಾಸಕರ ಬೆಂಬಲ ಹೊಂದಿದೆ. ಆದರೆ ಪ್ರತಿಪಕ್ಷಗಳ ಈಗಿನ 100 ಮತ್ತು ಐವರು ಪಕ್ಷೇತರರು ಕೈ ಜೋಡಿಸಿದರೆ ಆಗ 105ದಷ್ಟೇ ಆಗುತ್ತದೆ. ಹಾಗಾಗಿ ಯಡಿಯೂರಪ್ಪ ಸರಕಾರಕ್ಕೆ ಯಾವುದೇ ತೊಂದರೆಯಾಗದು.
ಆದರೆ ಬಿಜೆಪಿಯ 11 ಶಾಸಕರ ಅನರ್ಹತೆ ವಿಚಾರದಲ್ಲಿ ಸರಕಾರದ ಹಣೆಬರಹ ಬದಲಾಗುವ ಸಾಧ್ಯತೆಗಳಿವೆ. ಆದರೂ ಬಿಜೆಪಿಯ ಬಂಡಾಯ ಶಾಸಕರ ಪರವಾಗಿ ನ್ಯಾಯಾಲಯವು ತೀರ್ಪು ನೀಡುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಯಡಿಯೂರಪ್ಪನವರು ಪ್ರಸಕ್ತ ನಿರಾಳರಾಗಿದ್ದಾರೆ.