ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೈಸೂರು ದಸರಾ ಎಷ್ಟೊಂದು ಸುಂದರ, ನೋಡಿದಿರಾ?
(Mysore dasara 2010 | Srikanta Datta Narasimharaja Wodeyar | Yeddyurappa | Karnataka)
ವಿಶ್ವವಿಖ್ಯಾತ ಮೈಸೂರು ದಸರಾ ಹಿಂದೆಂದಿಗಿಂತ ವೈಭವೋಪೇತವಾಗಿ ವಿಜಯ ದಶಮಿಯಂದು ನಡೆದಿದ್ದು, ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ನವರಾತ್ರಿ ವೈಭವಕ್ಕೆ ಇಂದು ಅಧಿಕೃತ ತೆರೆಯನ್ನೆಳೆಯಲಾಗುತ್ತಿದೆ.
ಐತಿಹಾಸಿಕ ದಾಖಲೆಯ 400ನೇ ಜಂಬೂ ಸವಾರಿಗೆ ವಿಜಯದಶಮಿಯಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅರಮನೆ ಮುಂಭಾಗದ ವೇದಿಕೆಯಲ್ಲಿ ನಿಂತು ಬಲರಾಮನ ಮೇಲಿದ್ದ ಅಂಬಾರಿಯೊಳಗಿನ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭವಾಯಿತು.
NRB
ಈ ಸಂದರ್ಭದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ಮತ್ತು ಮೈಸೂರು ಮೇಯರ್ ಕೂಡ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.
ಅದಕ್ಕೂ ಮೊದಲು ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿಯವರು ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಡಿನ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುವ 32ಕ್ಕೂ ಹೆಚ್ಚು ಸ್ತಬ್ದಚಿತ್ರಗಳು, ಸಾವಿರಾರು ಕಲಾವಿದರು, ಸೇನಾ ತುಕಡಿಗಳ ಆಕರ್ಷಕ ಕವಾಯತು ಮೆರವಣಿಗೆಯಲ್ಲಿ ಸಾಗಿತು.
ವಿವಿಧ ಜಿಲ್ಲೆಗಳು, ಸಂಘಟನೆಗಳು, ಸರಕಾರಿ ಇಲಾಖೆಗಳು ಪ್ರಸ್ತುತ ಪಡಿಸಿದ ಸ್ತಬ್ಧಚಿತ್ರಗಳು ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಲಕ್ಷಾಂತರ ಮಂದಿ ಮೆರವಣಿಗೆ ಮತ್ತು ಬಲರಾಮನ ಗಜಗಾಂಭೀರ್ಯದ ಜಂಬೂ ಸವಾರಿ ವೈಭವವನ್ನು ಹೃನ್ಮನಗಳಲ್ಲಿ ತುಂಬಿಕೊಂಡರು.
ನಗರದಲ್ಲಿ ಹಬ್ಬದ ಸಡಗರ.. ಮುಖ್ಯಮಂತ್ರಿ, ಸಚಿವರುಗಳು, ಶಾಸಕರು ಸೇರಿದಂತೆ ಲಕ್ಷಾಂತರ ಮಂದಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ರಸನಿಮಿಷಗಳನ್ನು ಸವಿದರು. ಬಲರಾಮನ ಸಾರಥ್ಯದಲ್ಲಿ ನಡೆದ ಜಂಬೂ ಸವಾರಿ, ನಾಡಿನ ಚೆಲುವನ್ನು ಬಿಂಬಿಸುವ ಸ್ತಬ್ದಚಿತ್ರಗಳು ಮತ್ತು ಕಲಾವಿದರ ಕಲೆಯ ಕರಾಮತ್ತುಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡರು.
ದರ್ಬಾರ್ ನಡೆಸಿ ರಾಜನ ಪೋಷಾಕಿನಲ್ಲಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಜವಾದ ರಾಜನಂತೆ ಕಂಗೊಳಿಸುತ್ತಿದ್ದರು. ಇಡೀ ಸಾಂಸ್ಕೃತಿಕ ನಗರಿ ಮೈಸೂರು ಹಬ್ಬದ ಸಡಗರದಿಂದ ವಿಶೇಷವಾಗಿ ಕಾಣುತ್ತಿತ್ತು.
ವಜ್ರಮುಷ್ಠಿ ಕಾಳಗ... ವಿಜಯದಶಮಿಯಂದು ಬೆಳಿಗ್ಗೆ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗ ನಡೆಯಿತು. ಐತಿಹಾಸಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಡೆಯುವ ಸ್ಪರ್ಧಾರಹಿತ ಕಾಳಗದಲ್ಲಿ ನಾಲ್ವರು ಜಗಜಟ್ಟಿಗಳು ಕಾಳಗ ನಡೆಸಿದರು.
ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವಂತೆ ಜರಗುವ ಈ ಕಾಳಗದಲ್ಲಿ ಜಟ್ಟಿಯ ರಕ್ತ ಚಿಮ್ಮಿ ನೆಲಕ್ಕೆ ಮುಟ್ಟಬೇಕೆನ್ನುವುದು ಸಂಪ್ರದಾಯ. ಜಟ್ಟಿಗಳ ಮೈಯಲ್ಲಿ ರಕ್ತ ಚಿಮ್ಮಿದ ನಂತರ ವಜ್ರಮುಷ್ಠಿ ಕಾಳಗವನ್ನು ಸಮಾಪ್ತಿಗೊಳಿಸಲಾಯಿತು. ಇಲ್ಲಿ ಬಹುಮಾನವಿರದೆ, ಕೇವಲ ಸ್ವಾಮಿ ನಿಷ್ಠೆಯ ರೂಢಿಯನ್ನು ಪ್ರದರ್ಶಿಸುವುದಕ್ಕೋಸ್ಕರ ಕಾಳಗವನ್ನು ಏರ್ಪಡಿಸಲಾಗುತ್ತದೆ.
ಬಿಗಿ ಭದ್ರತೆ... ಮೈಸೂರು ದಸರಾಕ್ಕೆ ವಿಶ್ವದಾದ್ಯಂತದ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಭಾರೀ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಅರಮನೆ ಆವರಣದಿಂದ ಬನ್ನಿ ಮಂಟಪದವರೆಗಿನ ಸುಮಾರು ಐದು ಕಿಲೋ ಮೀಟರ್ ಉದ್ದಕ್ಕೂ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಯಾವುದೇ ಅನಾಹುತಗಳು ನಡೆಯಬಾರದು ಎಂಬ ನಿಟ್ಟಿನಲ್ಲಿ ಪಕ್ಕದ ಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದ್ದು, 4,000ಕ್ಕೂ ಹೆಚ್ಚು ಪೊಲೀಸರು ಭದ್ರತೆ ಒದಗಿಸಿದರು. ಹತ್ತಾರು ಅಂಬುಲೆನ್ಸ್‌ಗಳೂ ತುರ್ತು ಸೇವೆಗಳಿಗಾಗಿ ಸಿದ್ಧವಾಗಿದ್ದವು.