ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುದುರೆ ವ್ಯಾಪಾರದ ಸರಕಾರವನ್ನು ವಜಾಗೊಳಿಸಿ: ದೇಶಪಾಂಡೆ (RV Deshpande | Congress | Karnataka govt | BS Yeddyurappa)
Bookmark and Share Feedback Print
 
ಬಿಜೆಪಿ ಸರಕಾರವು ವಿಶ್ವಾಸ ಮತ ಯಾಚನೆಯ ನಂತರವೂ ತನ್ನ ಕುದುರೆ ವ್ಯಾಪಾರವನ್ನು ಮುಂದುವರಿಸಿದ್ದು, ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಆರೋಪಿಸಿದ್ದಾರೆ.

ಅಧಿಕಾರ ಲಾಲಸೆಯಿಂದ ಬಳಲುತ್ತಿರುವ ರಾಜ್ಯ ಸರಕಾರವು ಸಚಿವ ಸ್ಥಾನ ಮತ್ತು ಹಣದ ಆಮಿಷಗಳನ್ನೊಡ್ಡಿ ಪ್ರತಿಪಕ್ಷಗಳ ಶಾಸಕರನ್ನು ಬುಟ್ಟಿಗೆ ಹಾಕಲು ಯತ್ನಿಸುತ್ತಿದೆ. ಕುದುರೆ ವ್ಯಾಪಾರದ ಮೂಲಕವೇ ಅಧಿಕಾರಕ್ಕೆ ಬಂದು ಇದೀಗ, ಅದೇ ಲಜ್ಜೆಗೇಡಿ ರಾಜಕಾರಣವನ್ನು ಬಿಜೆಪಿ ಮುಂದುವರಿಸಿದೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ತನ್ನ ಆರೋಪಕ್ಕೆ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರನ್ನು ಉದಾಹರಿಸಿದರು. ಆರಂಭದಲ್ಲಿ ಸರಕಾರದಿಂದ ಬೆಂಬಲ ಹಿಂದಕ್ಕೆ ಪಡೆದುಕೊಳ್ಳುವಾಗ ಮುಂಚೂಣಿಯಲ್ಲಿದ್ದ ಮನುಷ್ಯನನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಹೇಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು ಎಂದು ಪ್ರಶ್ನಿಸಿದ ಅವರು, ಇದರ ಹಿಂದೆ ಇಂತಹುದೇ ಆಮಿಷಗಳಿವೆ ಎಂದು ಆರೋಪಿಸಿದರು.

ಇದೇ ರೀತಿಯ ಇನ್ನೊಂದು ಪ್ರಕರಣ ಜೆಡಿಎಸ್ ಶಾಸಕ ಅಶ್ವಥ್. ಅಕ್ಟೋಬರ್ 14ರಂದು ರಾತೋರಾತ್ರಿ ಅವರನ್ನು ಬಿಜೆಪಿ ಸಚಿವರುಗಳು ಸೇರಿ ರಾಜೀನಾಮೆ ಕೊಡಿಸಿದರು. ಅವರು ಸದನಕ್ಕೆ ಹಾಜರಾಗದಿರಲು ಕೂಡ ಬಿಜೆಪಿ ಸರಕಾರವೇ ಕಾರಣ. ಇಲ್ಲೂ ಸಾಕಷ್ಟು ಅಕ್ರಮ ವ್ಯವಹಾರಗಳು ನಡೆದಿವೆ ಎಂದು ದೇಶಪಾಂಡೆ ನೇರ ಆರೋಪ ಮಾಡಿದರು.

ಆರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಏಳು ಶಾಸಕರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೆಳೆದುಕೊಂಡ ಬಿಜೆಪಿ ಸರಕಾರವು, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಈ ತಂತ್ರವನ್ನು ಮುಂದುವರಿಸಿದೆ. ವಿವಿಧ ರೀತಿಯ ಆಮಿಷಗಳನ್ನೊಡ್ಡಿ ಪ್ರತಿಪಕ್ಷಗಳ ಶಾಸಕರನ್ನು ಸೆಳೆಯಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರು ಮತ್ತು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಬೇಕು. ಸರಕಾರವನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ಪುನಾರಚನೆಯ ಮಾತುಗಳನ್ನಾಡುತ್ತಿದ್ದಾರೆ. ಶಾಸಕರ ಅನರ್ಹತೆ ಕುರಿತ ಹೈಕೋರ್ಟ್ ತೀರ್ಪು ಮತ್ತು ರಾಜ್ಯಪಾಲರು ಶಿಫಾರಸು ಮಾಡಿರುವ ರಾಷ್ಟ್ರಪತಿ ಆಡಳಿತದ ಕುರಿತು ಅಂತಿಮ ತೀರ್ಮಾನ ಬರದ ಹೊರತು ಸಂಪುಟ ವಿಸ್ತರಣೆಗೆ ಸರಕಾರಕ್ಕೆ ಅಧಿಕಾರವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ