ಪುಣ್ಯಕ್ಷೇತ್ರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಕುಟುಂಬವೊಂದರ ಅರ್ಧಕ್ಕೂ ಹೆಚ್ಚು ಮಂದಿಯನ್ನು ಜವರಾಯ ಸೆಳೆದುಕೊಂಡಿದ್ದಾನೆ. ರಾತೋರಾತ್ರಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ನಡೆದಿರುವುದು ತಮಿಳುನಾಡಿನ ಸೇಲಂ ಜಿಲ್ಲೆಯ ನಾಮಕ್ಕಲ್ ಸಮೀಪ. ಬೆಂಗಳೂರಿನ ಚಾಮರಾಜಪೇಟೆಯ ಒಂದೇ ಕುಟುಂಬದ 13 ಮಂದಿ ಕನ್ಯಾಕುಮಾರಿ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ದುರ್ದೈವಿಗಳು ಪ್ರಯಾಣಿಸುತ್ತಿದ್ದ ಟೆಂಪೋ ಟ್ಯಾಕ್ಸಿಯ ಚಾಲಕ ನಿದ್ದೆಗೆ ಜಾರಿದ್ದೇ ಅವಘಢಕ್ಕೆ ಕಾರಣ. ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್ ಲಾರಿಗೆ ಟೆಂಪೋ ಡಿಕ್ಕಿ ಹೊಡೆದುದರಿಂದ ಅಪಘಾತ ಸಂಭವಿಸಿತ್ತು ಎಂದು ಪ್ರಾಥಮಿಕ ಮಾಹಿತಿಗಳು ಹೇಳಿವೆ.
ಮೃತರನ್ನು ಶಂಕರ್ (50), ಶಶಿಭೂಷಣ್ (74), ಸುಮಾ (45), ಮಂಜುನಾಥ್ (36), ಶ್ರೀನಿವಾಸ್ (48), ಮಂಜುಳಾ (46), ರೋಹಿಣಿ (43) ಎಂದು ಗುರುತಿಸಲಾಗಿದೆ.
ಘಟನೆ ನಡೆದಿರುವುದು ಇಂದು ಮುಂಜಾನೆ 12.50ರಿಂದ 1 ಗಂಟೆಯ ನಡುವೆ. ಅಪಘಾತದಲ್ಲಿ ಬದುಕುಳಿದಿರುವ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆಯಲ್ಲಿ ಮೂವರು ಮಕ್ಕಳು ಪವಾಡ ಸದೃಶವಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.