ರಾಜಕೀಯ ಬಿಟ್ಟು ಅಭಿವೃದ್ದಿಯತ್ತ ಗಮನಹರಿಸಿ: ಸಿಎಂಗೆ ಖರ್ಗೆ
ಗುಲ್ಬರ್ಗ, ಸೋಮವಾರ, 18 ಅಕ್ಟೋಬರ್ 2010( 12:51 IST )
ಇನ್ನಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಒಳ್ಳೆಯ ಬುದ್ದಿ ಬಂದು ರಾಜ್ಯದ ಬಡ ಜನರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ಗುಲ್ಬರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯದಶಮಿ ಅಂಗವಾಗಿ ನಾಡಿನ ಜನತೆಗೆ ಶುಭ ಕೋರಿ, ಸುಖ-ಶಾಂತಿ, ನೆಮ್ಮದಿ ಜೀವನ ತಂದುಕೊಡಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಇನ್ಮೇಲಾದ್ರೂ ನಾಡಿನ ಜನರ, ದುಃಖ ದುಮ್ಮಾನಗಳಿಗೆ ಸ್ಪಂದಿಸಲಿ. ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಲಿ ಎಂದರು.
ತಮ್ಮ 40 ವರ್ಷದ ರಾಜಕೀಯದಲ್ಲಿ ಇಂತಹ ಕೆಟ್ಟ ಸರಕಾರ, ಈ ಪರಿಸ್ಥಿತಿ ನೋಡಿರಲಿಲ್ಲ. ಇತ್ತೀಚಿನ ರಾಜಕೀಯ ಬೆಳವಣಿಗೆ ಮಾರಕವಾಗಿದೆ. ನಾಡಿನ ಜನ ತಲೆತಗ್ಗಿಸುವಂತಾಗಿದೆ. ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಎಂದೂ ತಲೆದೋರಿಲ್ಲ ಎಂದು ಪ್ರತಿಪಾದಿಸಿದರು.
ಅತಿವೃಷ್ಠಿಯಿಂದ ಜನ, ರೈತರು ತತ್ತರಿಸಿದ್ದಾರೆ. ಸೂರು ಕಳೆದುಕೊಂಡ ಬಡವರು ಬೀದಿಗೆ ಬಂದಿದ್ದಾರೆ. ವರ್ಷ ಕಳೆದರೂ ಸಮರ್ಪಕ ಸೂರು ಒದಗಿಸಲು ಸಾಧ್ಯವಾಗಿಲ್ಲ. ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಹೀನಾಯ ಸ್ಥಿತಿಯ ಮಧ್ಯೆಯೂ ರಾಜಕೀಯ ಮಾಡುವ ಮೂಲಕ ಕುರ್ಚಿಗಾಗಿ ಏನೆಲ್ಲಾ ಕಸರತ್ತು ಮಾಡಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಲಾದರೂ ರಾಜ್ಯದ ಅಭಿವೃದ್ದಿ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.