ನಾನು ಭಿನ್ನಮತೀಯನಲ್ಲ. ಜೆಡಿಎಸ್, ಕಾಂಗ್ರೆಸ್ ಜತೆ ಮೈತ್ರಿ ಸರಕಾರಕ್ಕೆ ಪ್ರಯತ್ನಿಸಿಲ್ಲ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯರಾಜಕಾರಣದಲ್ಲಿನ ಅಸ್ಥಿರತೆ ಬಿಕ್ಕಟ್ಟಿನ ಕುರಿತಂತೆ ಮತ್ತೊಮ್ಮೆ ಸಮಜಾಯಿಷಿ ನೀಡಿದ್ದಾರೆ.
ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20 ದಿನಗಳ ಕಾಲ ನಡೆದ ರಾಜಕಾರಣದ ನಾಟಕಕ್ಕೆ ಮೂಲ ಕಾರಣ ಜೆಡಿಎಸ್ ಎಂದು ದೂರಿದರು. ಒಟ್ಟಾರೆ ಅವರು ಹೇಳಿದ್ದಿಷ್ಟು.
ಪಕ್ಷೇತರ ಶಾಸಕರನ್ನೊಳಗೊಂಡಂತೆ ಬಿಜೆಪಿಯ ತಮ್ಮ ಆಪ್ತ ಶಾಸಕರನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಜೆಡಿಎಸ್ ಕೈಹಾಕಿರುವ ಮಾಹಿತಿ ತಮಗೆ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರಿಗೆ ಅ.1ರಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದೆ. ಜೆಡಿಎಸ್-ಕಾಂಗ್ರೆಸ್ ಸರಕಾರ ಬರುವುದನ್ನು ಹೇಗಾದರೂ ಮಾಡಿ ತಡೆಯಬೇಕು. ಭಿನ್ನಮತ ಹೋಗಲಾಡಿಸಬೇಕೆಂದು ಅವರಲ್ಲಿ ಚರ್ಚಿಸಿದ್ದೆ ಎಂದರು.
ಭಿನ್ನಮತೀಯರೆನ್ನುವ ನನ್ನ ಆಪ್ತರಲ್ಲಿ ಐದಾರು ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಮೂವರಿಗೆ ಸಚಿವ ಸ್ಥಾನ ಕೊಟ್ಟರೆ ಭಿನ್ನಮತೀಯ ಚಟುವಟಿಕೆ ನಿಲ್ಲಿಸಬಹುದು. ಇಲ್ಲದಿದ್ದರೆ ಸರಕಾರಕ್ಕೆ ಗಂಡಾಂತರ ಕಾದಿದೆ ಎಂದು ವಿಜಯೇಂದ್ರರಿಗೆ ತಿಳಿಸಿದ್ದೆ. ಅ.3ರಂದು ಸಿಎಂ ಮನೆಯಲ್ಲಿ ಬೆಳಗ್ಗೆ ತಿಂಡಿಗೆ ತಾವು ಬಾಲಚಂದ್ರ ಜಾರಕಿಹೊಳಿ ಹೋದಾಗ ಅಲ್ಲಿ ದೀಪ ಮತ್ತು ಅನ್ನದ ಮೇಲೆ ಪ್ರಮಾಣ ಮಾಡಿ ಯಾವುದೇ ಕಾರಣಕ್ಕೂ ಸರಕಾರಕ್ಕೆ ಧಕ್ಕೆ ಮಾಡುವುದಿಲ್ಲ. ಅತೃಪ್ತ ಶಾಸಕರನ್ನು ಮನವೊಲಿಸಿ ವಾಪಸು ಕರೆತರುವ ಭರವಸೆ ಕೊಟ್ಟೆವು ಎಂದು ತಿಳಿಸಿದರು.
ಇದಾದ ನಂತರ ಹೋಟೆಲ್‌ನಲ್ಲಿ ಅತೃಪ್ತರು ಒಂದೆಡೆ ಸೇರಿಕೊಂಡರು. ಅಲ್ಲಿ ಹೈದರಾಬಾದ್‌ಗೆ ಹೋಗಲು ಯೋಚಿಸಲಾಗಿತ್ತು. ಅಲ್ಲಿಗೆ ಬೀರೂರಿನ ಮಾಜಿ ಶಾಸಕ ಜೆಡಿಎಸ್‌ನ ಧರ್ಮೇಗೌಡ ಬಂದು ಅತೃಪ್ತ ಶಾಸಕರನ್ನು ಭೇಟಿ ಮಾಡಿದರು. ಅಲ್ಲಿಂದ ಜೆಡಿಎಸ್ ಸೆಳೆತ ಆರಂಭವಾಯಿತು ಎಂದು ವಿವರಣೆ ನೀಡಿದ್ದಾರೆ!