ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ,50 ಕೋಟಿ ಆಮಿಷ: ಸಿದ್ದು
ಬೆಂಗಳೂರು, ಸೋಮವಾರ, 18 ಅಕ್ಟೋಬರ್ 2010( 20:32 IST )
NRB
ಆಡಳಿತಾರೂಢ ಬಿಜೆಪಿ ಸರಕಾರವನ್ನು ಸುಭದ್ರಗೊಳಿಸಲು ಯಾವ ಮಟ್ಟಕ್ಕಾದರೂ ಇಳಿಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದು, ಆ ನಿಟ್ಟಿನಲ್ಲಿ ಬಿಜೆಪಿ ಮತ್ತೆ ಆಪರೇಶನ್ ಕಮಲ ಮುಂದುವರಿಸಿದೆ ಎಂದು ಆರೋಪಿಸಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಮತ್ತು ಮಂತ್ರಿಹುದ್ದೆಯ ಆಮಿಷ ಒಡ್ಡಲಾಗಿದೆ ಎಂದು ದೂರಿದ್ದಾರೆ.
ಸೋಮವಾರ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ಪಕ್ಷಾಂತರಕ್ಕೆ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಹುನ್ನಾರ ನಡೆಸಿದೆ. ಅಲ್ಲದೇ ಭರ್ಜರಿಯಾಗಿಯೇ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಈ ಬಗ್ಗೆ ಬಿಜೆಪಿ ಸಚಿವರು ಕುದುರೆ ವ್ಯಾಪಾರ ನಡೆಸಿರುವ ದೂರವಾಣಿ ಸಂಭಾಷಣೆಯನ್ನು ಕೂಡಲೇ ಬಹಿರಂಗಗೊಳಿಸಲಾಗುವುದು. ಈ ಬಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೂ ಪುರಾವೆ ಸಹಿತ ದೂರು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಸರಕಾರವನ್ನು ಸುಭದ್ರಗೊಳಿಸುವ ನೆಪದಲ್ಲಿ ಬಿಜೆಪಿ ಕುದುರೆ ವ್ಯಾಪಾರವನ್ನು ಮುಂದುವರಿಸಿದ್ದೇ ಆದಲ್ಲಿ ಬಿಜೆಪಿ ವಿರುದ್ಧವೇ ಹೋರಾಟ ಮಾಡುವುದಾಗಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಬಳ್ಳಾರಿಯ ರೆಡ್ಡಿ ಸಹೋದರರು, ಸಚಿವ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ ಕುದುರೆ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್‌ನ 73 ಶಾಸಕರಲ್ಲಿ 20 ಶಾಸಕರನ್ನು ಹೊರತುಪಡಿಸಿ ಉಳಿದ 53 ಶಾಸಕರಿಗೆ ಗಾಳ ಹಾಕುವ ಪ್ರಯತ್ನ ನಡೆಸಿರುವುದಾಗಿಯೂ ಗಂಭೀರವಾಗಿ ಆರೋಪಿಸಿದರು.