ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಇಬ್ಬರು ಉಗ್ರರಲ್ಲಿ ಓರ್ವ ಕರ್ನಾಟಕ ಗಡಿ ಪ್ರದೇಶದ ಕಾಸರಗೋಡಿನ ಮಸೀದಿಯೊಂದರಲ್ಲಿ ಮುಕ್ರಿಯಾಗಿ ಕಾರ್ಯನಿರ್ವಹಿಸುತ್ತಾ ಕಳೆದ ಹಲವಾರು ವರ್ಷಗಳಿಂದ ಯಾವ ರೀತಿಯಲ್ಲಿ ಜನತೆ ಮತ್ತು ಪೊಲೀಸರಿಗೆ ವಂಚಿಸುತ್ತಾ ಬಂದಿದ್ದ ಎಂಬುದು ಬಯಲಾಗಿದೆ.
ಎರಡು ದಿನಗಳ ಹಿಂದಷ್ಟೇ ಉಮರ್ ಫಾರೂಕ್, ಇಬ್ರಾಹಿಂ ಮೌಲವಿ ಎಂಬ ಇಬ್ಬರು ಉಗ್ರರನ್ನು ಬೆಂಗಳೂರು ಉಗ್ರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು. 2008ರ ಜುಲೈ 25ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ತಡಿಯಂದವಿಡ ನಾಸಿರ್ ಸಹಚರರು ಎಂದು ಹೇಳಲಾಗಿರುವ ಫಾರೂಕ್‌ನನ್ನು ರಾಜಸ್ತಾನದ ಅಜ್ಮೀರ್‌ನಲ್ಲಿ ಹಾಗೂ ಮೌಲವಿಯನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿತ್ತು.
ಮಸೀದಿಯಲ್ಲಿ ಧರ್ಮಗುರುವಾಗಿದ್ದ... ಇವರಲ್ಲಿ ಇಬ್ರಾಹಿಂ ಮೌಲವಿ (48) ಎಂಬಾತ ಸಕಲ ಕಲಾವಲ್ಲಭ. ಹತ್ತಾರು ವೇಷಗಳಲ್ಲಿ ಮುಸ್ಲಿಮರು ಮತ್ತು ಪೊಲೀಸರನ್ನು ಇದುವರೆಗೆ ಮೂರ್ಖರನ್ನಾಗಿ ಮಾಡುತ್ತಾ ಬಂದಿರುವ ಕಟ್ಟರ್ ಮೂಲಭೂತವಾದಿ. ಕೊನೆಗೂ ಆತ ಸಿಕ್ಕಿ ಬಿದ್ದಿರುವುದು ತನ್ನ ಕತ್ತಲ ಹಾದಿಯಲ್ಲಿ ಎಸಗಿದ ಪ್ರಮಾದಗಳಿಂದಾಗಿ.
ಈ ಮೌಲವಿ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಿತ್ತಡ್ಕದ ಗುಣಾಜೆ ಜಾಮಾ ಮಸೀದಿಯಲ್ಲಿ ಮುಕ್ರಿಯಾಗಿ ಕೆಲಸ ಮಾಡಿಕೊಂಡಿದ್ದ. 2009 ಜನವರಿ 17ಕ್ಕೆ ಮಸೀದಿಗೆ ವಕ್ಕರಿಸಿಕೊಂಡು, ಧಾರ್ಮಿಕ ಬೋಧನೆಯ ಸೋಗಿನಲ್ಲಿ ತನ್ನ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದ.
ಕನಿಷ್ಠ ಎರಡು ಮದುವೆ... ಉತ್ತರ ವಯನಾಡು ವರಾಂಬಟ್ಟದಲ್ಲಿ ಜನಿಸಿದ್ದ ಮೌಲವಿ, ವಯನಾಡು ವೆಳ್ಳಿಮುಖ್ ಪಡಿಚಾರತ್ತರ ಒರಂಬಟ್ಟು ನಿವಾಸಿ. ಬಾಲ್ಯದಿಂದಲೇ ಧಾರ್ಮಿಕ ಆಸಕ್ತಿಯನ್ನು ಬೆಳೆಸಿಕೊಂಡಿದ್ದವನು ಈ ರೀತಿಯಾಗಿ ಭಯೋತ್ಪಾದಕನಾಗಿ ಬದಲಾಗುತ್ತಾನೆಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ.
ಮೂಲಗಳ ಪ್ರಕಾರ ಈತನಿಗೆ ಕನಿಷ್ಠ ಎರಡು ಪತ್ನಿಯರು ಮತ್ತು ಹಲವು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಕಣ್ಣೂರು-ಚಕ್ಕರಕ್ಕಲ್ ಸಮೀಪದ ಕಾಪಾಡ್ ಎಂಬಲ್ಲಿನ ಬಡ ಯುವತಿಯೋರ್ವಳನ್ನು ಎರಡನೇ ಮದುವೆಯಾಗಿದ್ದ.
ಸಂಭಾವಿತ ಮುಕ್ರಿಯೀತ... ಈತ ಎಷ್ಟು ಚಾಣಾಕ್ಷನೆಂದರೆ ಇದುವರೆಗೂ ತನ್ನ ಬಗ್ಗೆ ಯಾರೊಬ್ಬರಲ್ಲೂ ಸಂಶಯ ಬಾರದಂತೆ ನಡೆದುಕೊಂಡಿದ್ದಾನೆ. ಸ್ಥಳೀಯವಾಗಿ ಪ್ರಭಾವಿ ವ್ಯಕ್ತಿ, ಸಂಭಾವಿತ ಮುಕ್ರಿ. ಮಸೀದಿಯಲ್ಲಿ ದಿನಾ ನಾಲ್ಕೈದು ಬಾರಿ ಬಾಂಗ್ ಕೊಟ್ಟು, ಧಾರ್ಮಿಕ ಬೋಧನೆಗಳನ್ನು ಮಾಡಿಕೊಂಡು ಬಂದಿದ್ದ.
ಈ ನಡುವೆ ಆಗಾಗ ಮಸೀದಿಗೆ ರಜಾ ಹಾಕಿ ಎಲ್ಲೆಲ್ಲೋ ಹೋಗಿ ಬರುತ್ತಿದ್ದ. ಈ ಬಗ್ಗೆ ಸ್ಥಳೀಯರಿಗೆ ಸಬೂಬುಗಳನ್ನು ಹೇಳುತ್ತಿದ್ದ. ಮುಂಡಿತ್ತಡ್ಕ ಪ್ರದೇಶದ ಜನತೆಯ ಒಲವು ಮತ್ತು ವಿಶ್ವಾಸವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಬಾಂಗ್ ಕೇಳಲಿಲ್ಲ, ಮುಕ್ರಿ ಕಾಣಲಿಲ್ಲ... ಮೊನ್ನೆ ಶುಕ್ರವಾರ ಗುಣಾಜೆ ಮಸೀದಿಯಿಂದ ಬಾಂಗ್ ಕೇಳಲಿಲ್ಲ. ಮೌಲವಿ ರಜೆ ಕೂಡ ಹಾಕಿರಲಿಲ್ಲ. ಹೀಗಾಗಿ ಸಂಶಯಗೊಂಡ ಸ್ಥಳೀಯರು ಮಸೀದಿಗೆ ಬಂದಾಗ ಮುಕ್ರಿ ಅಲ್ಲಿರಲಿಲ್ಲ.
ಆತಂಕಗೊಂಡವರು ಸಾಕಷ್ಟು ಹುಡುಕಾಟ ನಡೆಸಿದ ನಂತರ ಬದಿಯಡ್ಕ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಗಷ್ಟೇ ತಿಳಿದು ಬಂದದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವುದು. ಇದನ್ನು ನಂಬುವ ಸ್ಥಿತಿ ಮಾತ್ರ ಸ್ಥಳೀಯರದ್ದಾಗಿರಲಿಲ್ಲ.
ಕಳೆದ ಎರಡು ತಿಂಗಳುಗಳಿಂದ ಮೌಲವಿಯ ಚಲನವಲನಗಳ ಮೇಲೆ ಬೆಂಗಳೂರು ಪೊಲೀಸರು ಕಣ್ಣಿಟ್ಟಿದ್ದರು. ಅದರಂತೆ ವೇಷ ಮರೆಸಿಕೊಂಡು ಮೌಲವಿಯನ್ನು ಹತ್ತಿರದಿಂದ ಗಮನಿಸುತ್ತಿದ್ದರು. ಕೊನೆಗೂ ಅವರ ಗುಪ್ತ ಕಾರ್ಯಾಚರಣೆ ಫಲ ಕೊಟ್ಟದ್ದು ಕಳೆದ ಶುಕ್ರವಾರ. ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಭಯೋತ್ಪಾದನೆಯ ಕ್ಲಾಸ್... ಈತನ ವೃತ್ತಿ ಭಯೋತ್ಪಾದನೆ, ಪ್ರವೃತ್ತಿ ಮುಕ್ರಿಯ ವೇಷದಲ್ಲಿ ಧಾರ್ಮಿಕ ಬೋಧನೆ. ಧಾರ್ಮಿಕ ಬೋಧನೆಯನ್ನೇ ನೆಪವಾಗಿಟ್ಟುಕೊಂಡು ಮುಸ್ಲಿಂ ಯುವಕರ ತಲೆ ಕೆಡಿಸುವಲ್ಲಿ ತನ್ನ ಅರ್ಧ ಆಯಸ್ಸನ್ನೇ ಕಳೆದಿದ್ದಾನೆ.
ಈತ ಕಣ್ಣೂರಿನ ಖಾಸಗಿ ಕಟ್ಟಡವೊಂದರಲ್ಲಿ ಟಿ. ನಸೀರ್ ಜತೆ ಸೇರಿ ರಾತ್ರಿ ತಡವಾಗಿ ತನ್ನ ತರಗತಿಗಳನ್ನು ನಡೆಸುತ್ತಿದ್ದ. ಅದು ಮುಂಜಾನೆಯವರೆಗೂ ಮುಂದುವರಿಯುತ್ತಿತ್ತು. ಧಾರ್ಮಿಕ ಬೋಧನೆಗಳನ್ನು ಮಾಡುತ್ತಾ ಮಾಡುತ್ತಾ, ನಿಧಾನವಾಗಿ ಭಯೋತ್ಪಾದನೆಯ ಬಗ್ಗೆ ಪ್ರಚೋದನೆ-ಪ್ರೇರಣೆಗಳನ್ನು ನೀಡುತ್ತಾ ಬಂದಿದ್ದ.
ಆರಂಭದಲ್ಲಿ ಈತನ ಈ ತರಗತಿಗೆ 200ರಷ್ಟು ಯುವಕರು ಸೇರಿಕೊಂಡಿದ್ದರು. ಇಲ್ಲಿ ಯುವಕರಿಗೆ ಮಾತ್ರ ಪ್ರವೇಶವಿತ್ತು. ಆದರೆ ಈತನ ಪಾಠಗಳು ಯಾವಾಗ ಭಯೋತ್ಪಾದನೆಯತ್ತ ತಿರುಗಿತೋ, ಆಗ ಕೆಲವರು ಪಥ್ಯವೆನಿಸದೆ ತರಗತಿಗಳಿಗೆ ಬರುವುದನ್ನು ನಿಲ್ಲಿಸಿ ಬಿಟ್ಟರು.
ಇದು ಮೌಲವಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಆತನಿಗೆ ಬೇಕಿರುವುದು 200 ಮಂದಿಯಲ್ಲ, ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಹಾಗಾಗಿ ತನ್ನ ಪಾಠಕ್ಕೆ ಮರುಳಾಗಿ ಅಲ್ಲೇ ಉಳಿದವರನ್ನು ಬ್ರೈನ್ ವಾಶ್ ಮಾಡಿ, ಉಗ್ರರನ್ನಾಗಿ ಪರಿವರ್ತಿಸಿದ. ಸಾಕಷ್ಟು ತರಬೇತಿಗಳನ್ನೂ ನೀಡಿದ.
ಐವರು ಪಾಕಿಸ್ತಾನಕ್ಕೆ... ನಂತರದ ಹಂತ ಅವರನ್ನು ಹೈದರಾಬಾದಿಗೆ ಕಳುಹಿಸುವುದು. ಅಲ್ಲಿ ತ್ವರೀಖತ್ ನಡೆಸುತ್ತಿದ್ದ ತರಬೇತಿ ಶಿಬಿರದಲ್ಲಿ ಮತ್ತಷ್ಟು ತರಬೇತಿಯನ್ನು ನೀಡಲಾಯಿತು. ಯುವಕರ ಮನಸ್ಸನ್ನು ಕಲ್ಲು ಮಾಡುವ ಮತ್ತೊಬ್ಬ ಚಾಣಾಕ್ಷ ಹೈದರಾಬಾದಿ ತ್ವರೀಖತ್.
ಅಮಾಯಕರಾಗಿದ್ದು, ಭಯೋತ್ಪಾದಕರಾಗಿ ಬದಲಾದ ಕಾಸರಗೋಡು ಯುವಕರ ನಂತರದ ಪ್ರಯಾಣ ಪಾಕಿಸ್ತಾನಕ್ಕೆ. ಈ ಕೆಲಸವನ್ನು ಉಮರ್ ಫಾರೂಕ್‌ಗೆ ವಹಿಸಲಾಯಿತು. ಹೈದರಾಬಾದಿನಲ್ಲಿ ತರಬೇತಿ ಪಡೆದವರಲ್ಲಿ ಐವರನ್ನು ಆಯ್ಕೆ ಮಾಡಿದ್ದು ಅಬ್ದುಲ್ ಜಲೀಲ್ ಎಂಬ ಉಗ್ರಗಾಮಿ. ಈತ ಉಗ್ರರ ಕೃತ್ಯಗಳಿಗೆ ನೇಮಕಾತಿ ಮಾಡಿಕೊಳ್ಳುವ ಏಜೆಂಟ್.
ಪಾಕಿಸ್ತಾನದಲ್ಲಿ ಸಮಗ್ರ ತರಬೇತಿ ಪಡೆದುಕೊಂಡು ಬಂದ ಯುವಕರನ್ನು ಮೊದಲ ಬಾರಿ ಬಳಸಿದ್ದು ಜಮ್ಮು-ಕಾಶ್ಮೀರದಲ್ಲಿ. ಅದುವರೆಗೆ ಜಯವನ್ನೇ ಕಂಡಿದ್ದ ಇಬ್ರಾಹಿಂ ಮೌಲವಿಗೆ ಅಲ್ಲಿಂದ ನಿಧಾನವಾಗಿ ಸೋಲು ವಕ್ಕರಿಸಲಾರಂಭಿಸಿತು.
ಮೌಲವಿಯಿಂದ ಪ್ರಾಥಮಿಕ ತರಬೇತಿ ಪಡೆದು ಉಗ್ರರಾಗಿ ಬದಲಾಗಿದ್ದವರಲ್ಲಿ ನಾಲ್ವರು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಜತೆಗಿನ ಗುಂಡಿನ ಚಕಮಕಿಯಲ್ಲಿ ಬಲಿಯಾಗುತ್ತಾರೆ. ತಮಗೆ ಅಪಾಯವಿದೆ ಎಂಬುದನ್ನು ಮೊದಲೇ ಅರಿತಿದ್ದ ಈ ನಾಲ್ವರು, ತಮ್ಮನ್ನು ನೇಮಕಾತಿ ಮಾಡಿಕೊಂಡಿದ್ದ ಜಲೀಲ್‌ಗೆ ಫೋನ್ ಮಾಡಿದ್ದರು. 'ತಮ್ಮನ್ನು ಬಂಧಿಸುವ ಸಾಧ್ಯತೆಯಿದೆ. ಇದನ್ನು ಉಸ್ತಾದ್ ಇಬ್ರಾಹಿಂಗೆ ತಿಳಿಸಬೇಕು' ಎಂದಿದ್ದರು.
ಅದುವರೆಗೆ ಇಬ್ರಾಹಿಂ ಕುರಿತು ಪೊಲೀಸರಿಗೆ ಮಾಹಿತಿಯಿರಲಿಲ್ಲ. ಘಟನೆ ನಡೆದ ಬೆನ್ನಿಗೆ ಕಾಶ್ಮೀರದಲ್ಲಿ ಜಲೀಲ್ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಜಲೀಲ್ ಮತ್ತು ಇಬ್ರಾಹಿಂ ಇಬ್ಬರನ್ನೂ ಪತ್ತೆ ಹಚ್ಚುವ ಕಾರ್ಯಕ್ಕೂ ಪೊಲೀಸರು ಈ ಸಂದರ್ಭದಲ್ಲಿ ಚಾಲನೆ ನೀಡಿದರು.
ಆ ಹೊತ್ತಿಗೆ ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಟಿ. ನಸೀರ್ ಮತ್ತು ಇಬ್ರಾಹಿಂ ನಿಕಟ ಸಂಬಂಧ ಹೊಂದಿರುವುದು ಗುಪ್ತದಳಗಳಿಗೆ ತಿಳಿದು ಬಂತು. ಅದರ ಹೆಚ್ಚಿನ ಮಾಹಿತಿ ಲಭ್ಯವಾದದ್ದು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿರುವ ಮದನಿಯಿಂದ.
ಗುಣಾಜೆಯತ್ತ ಬಂದದ್ದು ಹೀಗೆ... ಈ ಇಬ್ರಾಹಿಂ ಮೌಲವಿಗೂ, ಗುಣಾಜೆ ಮಸೀದಿಗೂ ಕೆಲ ವರ್ಷಗಳ ಹಿಂದಿನವರೆಗೆ ಯಾವುದೇ ರೀತಿಯ ಸಂಬಂಧವಿರಲಿಲ್ಲ. ಆದರೆ ಕಾಶ್ಮೀರದಲ್ಲಿ ನಾಲ್ವರು ಉಗ್ರರು ಸತ್ತ ನಂತರ ತನ್ನ ಹೆಸರು ಬಹಿರಂಗವಾದದ್ದು ಖಚಿತವಾಗುತ್ತಿದ್ದಂತೆ ಹುಚ್ಚನಂತಾದ ಇಬ್ರಾಹಿಂ ಮತ್ತು ಆತನ ಚೋರ ಗುರು ನಸೀರ್ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದಿದ್ದರು.
ಅಲ್ಲಿಂದ ಚೆಂಬೇರಿ ಮೂಲಕ ಇಬ್ರಾಹಿಂ ಪಾಣತ್ತೂರಿಗೆ ಬಂದಿದ್ದ. ಅಲ್ಲಿ ಈತನಿಗೆ ನೆರವಾದದ್ದು ಪಾಪ್ಯುಲರ್ ಫ್ರಂಟ್ ಜತೆ ನಿಕಟ ಸಂಬಂಧ ಹೊಂದಿದ್ದ ವ್ಯಕ್ತಿ. ಆತನ ಸಹಕಾರದಿಂದ ಪಾಣತ್ತೂರಿನಲ್ಲಿ ಇಬ್ರಾಹಿಂ ಮುಹಮ್ಮದ್ ಮೌಲವಿ ಎಂಬ ಹೆಸರಿನಲ್ಲಿ ಅಡಗಿಕೊಂಡಿದ್ದ.
ಇಲ್ಲೂ ಇಬ್ರಾಹಿಂಗೆ ನಡುಕ ಆರಂಭವಾಯಿತು. ತಕ್ಷಣವೇ ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಟ ಆರಂಭಿಸಿದ ಇಬ್ರಾಹಿಂ ಬದಿಯಡ್ಕ ಸಮೀಪದ ಗುಣಾಜೆಗೆ ಬಂದು ಸೇರಿಕೊಂಡ. ತಾನು ಧಾರ್ಮಿಕ ಬೋಧಕನೆಂದು ಜನರ ವಿಶ್ವಾಸ ಗಿಟ್ಟಿಸಲು ಯತ್ನಸಿದ.
ಅದರಲ್ಲಿ ಯಶಸ್ವಿಯಾದ ನಂತರ ತನ್ನ ತಂತ್ರ-ಕುತಂತ್ರಗಳನ್ನು ಬಳಸಿ ಮಸೀದಿಯಲ್ಲಿ ಮುಕ್ರಿಯಾಗಿ ಆಯ್ಕೆಯಾದ. ಮೌಲವಿ ಜಾಡಿನ ಬಗ್ಗೆ ಸದಾ ಜಾಗೃತರಾಗಿದ್ದ ಪೊಲೀಸರಿಗೆ ಈತ ಗುಣಾಜೆಯಲ್ಲಿರುವುದು ತಿಳಿದು ಬಂದದ್ದು ಆತ ಉಮರ್ ಫಾರೂಕ್ ಜತೆ ಮತ್ತೆ ಸಂಪರ್ಕ ಬೆಳೆಸಿದ ಕಾರಣದಿಂದ.
ಗುಣಾಜೆಗೆ ಬಂದ ನಂತರ ಫಾರೂಕ್ ಜತೆ ಸಮಾಲೋಚನೆ ನಡೆಸುತ್ತಾ, ಹೈದರಾಬಾದ್, ರಾಜಸ್ತಾನ ಮುಂತಾದೆಡೆ ಹೋಗಿ ಬರುತ್ತಿದ್ದ.
ಲಷ್ಕರ್ ಭಯೋತ್ಪಾದಕನೀತ... ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವ ಈತ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ಓರ್ವ ಕಮಾಂಡರ್ ಎನ್ನುವುದು ತನಿಖಾ ದಳಗಳ ವಾದ.
ಇದಕ್ಕೆ ಪುಷ್ಠಿ ದೊರಕುವಂತೆ ಈತನ ಮೊಬೈಲಿನಲ್ಲಿ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯ ಮನೆಯ ಖಾಸಗಿ ದೂರವಾಣಿ ಸಂಖ್ಯೆ, ಅಂತಾರಾಷ್ಟ್ರೀಯ ಭಯೋತ್ಪಾದಕರ ದೂರವಾಣಿ ಸಂಖ್ಯೆಗಳು ಸೇರಿದಂತೆ ಮತ್ತಿತರ ಮಾಹಿತಿಗಳು ಲಭ್ಯವಾಗಿವೆ.
ಅಲ್ಲದೆ ಇಬ್ರಾಹಿಂ ಮೌಲವಿ ಪಾಕಿಸ್ತಾನದಲ್ಲಿ ಉಗ್ರಗಾಮಿ ತರಬೇತಿಯನ್ನೂ ಪಡೆದಿದ್ದ. ಕೆಲ ವರ್ಷಗಳ ಹಿಂದೆ ಕೊಯಂಬತ್ತೂರು ಬಾಂಬ್ ಸ್ಫೋಟದಲ್ಲೂ ಮಹತ್ವದ ಪಾತ್ರ ವಹಿಸಿದ್ದ. ಬೆಂಗಳೂರು ಸ್ಫೋಟದಲ್ಲಿ ನಸೀರ್, ಮದನಿ ಮುಂತಾದವರ ಜತೆ ಇದೀಗ ಬಂಧನಕ್ಕೊಳಗಾಗಿರುವ ಇಬ್ಬರದ್ದೂ ಮಹತ್ವದ ಪಾತ್ರ ಎಂದು ಪೊಲೀಸ್ ಮೂಲಗಳು ಹೇಳಿವೆ.