ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಂಗೀಕುಸ್ತಿ: ಮತ್ತೆ ಮಂತ್ರಿಗಿರಿಗಾಗಿ ಶಾಸಕರ ಲಾಬಿ! (BJP | Congress | JDS | Yeddyurappa | CT Ravi | Ishwarappa)
Bookmark and Share Feedback Print
 
ರಾಜ್ಯರಾಜಕಾರಣದಲ್ಲಿನ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಸಂಪುಟ ಪುನಾರಚನೆಗೆ ನಿರ್ಧರಿಸುತ್ತಿದ್ದಂತೆಯೇ ಪಕ್ಷದ ಹಲವು ಶಾಸಕರ ನಡುವೆ ಮಂತ್ರಿಗಿರಿಗಾಗಿ ತೀವ್ರ ಪೈಪೋಟಿ ನಡೆಯುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಚಿವಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಂತ್ರಿಗಿರಿಗಾಗಿ ಲಾಬಿ ನಡೆಸಿ ನಿರಾಸೆ ಆದ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ವಾಪಸ್ ಪಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದೀಗ ರವಿ ಪುನಃ ಸಚಿವಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.

ಆದರೆ ಸರಕಾರದ ಮುಖ್ಯ ಸಚೇತಕ ಡಿ.ಎನ್.ಜೀವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಇಬ್ಬರೂ ಚಿಕ್ಕಮಗಳೂರು ಕ್ಷೇತ್ರದವರಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಮಂತ್ರಿಗಿರಿಯನ್ನು ತನಗೆ ನೀಡಬೇಕೆಂದು ಜೀವರಾಜ್ ಪಟ್ಟು ಹಿಡಿದ್ದಾರೆನ್ನಲಾಗಿದೆ. ಒಂದು ವೇಳೆ ರವಿಗೆ ಸಚಿವಸ್ಥಾನ ನೀಡಿದರೆ, ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡುವ ಬೆದರಿಕೆಯನ್ನು ಒಡ್ಡಿದ್ದಾರೆನ್ನಲಾಗಿದೆ.

ಮತ್ತೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಸಿ.ಟಿ.ರವಿಗೆ ಬೆಂಬಲವಾಗಿ ನಿಂತಿದ್ದರೆ, ಡಿ.ಎನ್.ಜೀವರಾಜ್‌ಗೆ ಮುಖ್ಯಮಂತ್ರಿಗಳ ಕೃಪಾಕಟಾಕ್ಷ ಇರುವುದರಿಂದ ಇದು ಮತ್ತೊಂದು ರಾದ್ಧಾಂತಕ್ಕೆ ಕಾರಣವಾಗುವ ಸಾಧ್ಯತೆಯೂ ದಟ್ಟವಾಗಿದೆ.

ಬಿಜೆಪಿ ಕಾರ್ಯಕರ್ತರ ಒತ್ತಡ: ಸಚಿವ ಸಂಪುಟ ಪುನಾರಚನೆ ನಂತರ ಪಕ್ಷೇತರ ಸೇರಿದಂತೆ ಸುಮಾರು 17 ಶಾಸಕರು ಸರಕಾರದ ವಿರುದ್ಧವೇ ಬಂಡಾಯ ಸಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ್ದು, ಆ ಪ್ರಕರಣವೇ ಇದೀಗ ಹೈಕೋರ್ಟ್ ಕಟಕಟೆಯಲ್ಲಿದೆ. ಎರಡನೇ ಸುತ್ತಿನ ಇನಿಂಗ್ಸ್ ಎಂಬಂತೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮಂತ್ರಿಗಿರಿ ನೀಡಿ ಎಂದು ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಒತ್ತಡ ಹೇರಿದ್ದಾರೆ.

ಅದೇ ರೀತಿ ವಿಧಾನಪರಿಷತ್ ಸದಸ್ಯ ದಲಿತ ಸಮುದಾಯದ ಡಿ.ಎಸ್.ವೀರಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ವೀರಯ್ಯ ಬೆಂಬಲಿಗರು ಕೂಡ ರೇಸ್‌ಕೋರ್ಸ್‌ನಲ್ಲಿರುವ ಸಿಎಂ ಮನೆಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.

ಸಂಪುಟದಲ್ಲಿ ಆರು ಸಚಿವ ಸ್ಥಾನ ಖಾಲಿ ಇದ್ದು, ಮಂತ್ರಿಗಿರಿಗಾಗಿ ಶಾಸಕರಲ್ಲಿ ತೀವ್ರ ಪೈಪೋಟಿ ನಡೆದಿದೆ. ಸದಾ ಪಕ್ಷಾಂತರ ಮಾಡುತ್ತಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ಗೆ ಮಂತ್ರಿಗಿರಿ ನೀಡಲಾಗುತ್ತದೆ ಎಂಬ ವದಂತಿಯೂ ದಟ್ಟವಾಗಿದೆ. ಅಲ್ಲದೇ, ಬಿಜೆಪಿಯ ಹಿರಿಯ ಶಾಸಕರು ಕೂಡ ತೀವ್ರ ಲಾಬಿ ನಡೆಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ಕಂಟಕ ಎದುರಾಗುವ ಲಕ್ಷಣ ಗೋಚರಿಸತೊಡಗಿದೆ.
ಸಂಬಂಧಿತ ಮಾಹಿತಿ ಹುಡುಕಿ