ಮುದ್ದೇಬಿಹಾಳ, ಮಂಗಳವಾರ, 19 ಅಕ್ಟೋಬರ್ 2010( 14:32 IST )
ಮುಖ್ಯಮಂತ್ರಿ ಹುದ್ದೆ ಕೊಡುತ್ತೇನೆಂದರೂ ಬಿಜೆಪಿ ಸೇರುವುದಿಲ್ಲ ಎಂದು ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದಲ್ಲಿ ಏರ್ಪಡಿಸಿದ್ದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿ, ಕೆಲ ದಿನಗಳಿಂದ ತಾವು ಬಿಜೆಪಿ ಸೇರುತ್ತೇವೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಜನತೆಗೆ ತಪ್ಪು ಸಂದೇಶ ತಲುಪಿಸುತ್ತಿದ್ದಾರೆ. ಈ ಬಗ್ಗೆ ಹಿಪ್ಪರಗಿ ಕ್ಷೇತ್ರದ ಮತದಾರರು ಇಂಥ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಶಾಸಕರು ಇರುವ ಮತಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ತಾರತಮ್ಯ ಮಾಡುತ್ತಿರುವ ಬಿಜೆಪಿ ಸರಕಾರ ತನ್ನ ಆಂತರಿಕ ಕಚ್ಚಾಟದಿಂದ ಶೀಘ್ರ ಪತನ ಹೊಂದಲಿದೆ ಎಂದರು. ಬಸವಣ್ಣನ ಸಿದ್ದಾಂತಗಳುಳ್ಳ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.