ಚಿತ್ರದುರ್ಗ, ಮಂಗಳವಾರ, 19 ಅಕ್ಟೋಬರ್ 2010( 14:34 IST )
ರಾಜಕೀಯ ಪ್ರತಿನಿಧಿಗಳಿಗೆ ಮತ ಹಾಕಿದ ಜನತೆ ತಂದೆ, ತಾಯಿಗಳಿದ್ದಂತೆ. ಜನಪ್ರತಿನಿಗಳು ಇದನ್ನು ಅರ್ಥಮಾಡಿಕೊಂಡು ಮತದಾರರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಗ್ರಂಥಾಲಯ ಸಚಿವ ರೇವೂ ನಾಯ್ಕ ಬೆಳಮಗಿ ಅಭಿಪ್ರಾಯಪಟ್ಟರು.
ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಆರನೇ ದಿನವಾದ ಸೋಮವಾರ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಶ್ರೀ ಸೇವಾಲಾಲ್ ಮಹಾರಾಜರ ಸ್ಮರಣೋತ್ಸವ-ಲಂಬಾಣಿ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಶರಣ ಸಂಸ್ಕೃತಿ ಉತ್ಸವ ಬಂಜಾರ ಸಂಸ್ಕೃತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮವಾಗಿದೆ. ತಾವು ಇಲ್ಲಿಗೆ ರಾಜ್ಯದ ಮಂತ್ರಿಯಾಗಿ ಬಂದಿಲ್ಲ. ಬದಲಾಗಿ ಸಮಾಜ ಸೇವಕನಾಗಿ ಬಂದಿದ್ದೇನೆ. ಎಲ್ಲ ಪಕ್ಷಗಳು ಜಾತಿ ಆಧಾರದ ಮೇಲೆ ಟಿಕೆಟ್, ಮಂತ್ರಿ ಸ್ಥಾನ ನೀಡುತ್ತವೆ. ನನಗೂ ಸಮಾಜದ ಕೋಟಾದಡಿ ಮಂತ್ರಿ ಸ್ಥಾನ ಲಭಿಸಿದೆ. ಈ ಋಣ ತೀರಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಬಂಜಾರ ನಿಗಮ ಸ್ಥಾಪಿಸಬೇಕೆಂದು ಹಿಂದಿನ ಕಾಂಗ್ರೆಸ್- ಜೆಡಿಎಸ್ ಸರಕಾರ ರಚನೆಯಾದಾಗ ಅಲೆದಾಡಿ ಚಪ್ಪಲಿ ಸವೆದವೇ ಹೊರತು ನಿಗಮ ಮಾತ್ರ ಸ್ಥಾಪನೆಯಾಗಲಿಲ್ಲ. ಆದರೆ, ಬಿಜೆಪಿ ಸರಕಾರ ಬಂಜಾರ ನಿಗಮ ಸ್ಥಾಪಿಸಿದೆ. ಕೆಪಿಎಸ್ಸಿಯಲ್ಲಿ ಸಮಾಜದವರಿಗೆ ಸದಸ್ಯ ಸ್ಥಾನ ನೀಡಿದೆ. ಗುಲ್ಬರ್ಗ ವಿವಿಗೆ ಕುಲಪತಿ ನೇಮಿಸಿದೆ. ಜನತೆ ಇದನ್ನು ಎಂದಿಗೂ ಮರೆಯಬಾರದು ಎಂದು ಮನವಿ ಮಾಡಿದರು.
ರಾಜ್ಯದ ಪ್ರತಿ ತಾಂಡಾದಲ್ಲಿ ಸೇವಾಲಾಲ್ ಸಮುದಾಯ ಭವನ ಹಾಗೂ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಇದಕ್ಕೆ ಮುಖ್ಯಮಂತ್ರಿ ಹಣ ನೀಡಲು ಸಿದ್ಧರಿದ್ದಾರೆ. ಸಮುದಾಯದ ಜನತೆ ಶೈಕ್ಷಣಿಕವಾಗಿ ಅಭಿವೃದ್ದಿಗೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.