ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಪರೇಷನ್ ಕಮಲ?; ಕಾಂಗ್ರೆಸ್ ಶಾಸಕ ರಾಮಚಂದ್ರ ರಾಜೀನಾಮೆ (Congress | BJP | Operation Kamala | Shiv kumar | Yeddyurappa)
Bookmark and Share Feedback Print
 
ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ವಿ.ರಾಮಚಂದ್ರ ಅವರು ಮಂಗಳವಾರ ವೈಯಕ್ತಿಕ ಕಾರಣ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಮತ್ತೆ ಆಪರೇಶನ್ ಕಮಲಕ್ಕೆ ಮುಂದಾಗಿದೆಯೇ ಎಂಬ ಶಂಕೆ ದಟ್ಟವಾಗತೊಡಗಿದೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್, ಜೆಡಿಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಎಸ್.ವಿ.ರಾಮಚಂದ್ರ ಅವರು ಇಂದು ಮಧ್ಯಾಹ್ನ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರವಾನಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ರಾಮಚಂದ್ರ ಅವರು ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಷ್ಟೇ ಅಲ್ಲ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಚಂದ್ರ ಅವರನ್ನು ಬಳ್ಳಾರಿಯ ಗಣಿಧಣಿಗಳು ಸೆಳೆಯುವ ಪ್ರಯತ್ನ ಮಾಡುತ್ತಿರುವುದಾಗಿ ಊಹಾಪೋಹ ಕೇಳಿಬಂದಿತ್ತು. ಅಲ್ಲದೇ, ನಾಯಕ ಜನಾಂಗಕ್ಕೆ ಸೇರಿದ್ದ ರಾಮಚಂದ್ರ ಅವರನ್ನು ಅದೇ ಜನಾಂಗದ ಸಚಿವ ಬಿ.ಶ್ರೀರಾಮುಲು ಮೂಲಕ ಬಿಜೆಪಿ ತೆಕ್ಕೆಗೆ ಸೆಳೆಯಲು ತೆರೆಮರೆಯ ಕಸರತ್ತು ನಡೆಸಲಾಗಿತ್ತು.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಬಿಜೆಪಿ ಮುಖಂಡರು ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ ನಾನು ಯಾವುದೇ ಕಾರಣಕ್ಕೂ ಪಕ್ಷ ತೊರೆದು ಬಿಜೆಪಿ ಸೇರುವುದಿಲ್ಲ. ಇದೆಲ್ಲಾ ಗಾಳಿ ಸುದ್ದಿ ಎಂದು ಸ್ಪಷ್ಟಪಡಿಸಿದ್ದರು. ಎಸ್.ವಿ.ರಾಮಚಂದ್ರ ಅವರು 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು.

ರಾಮಚಂದ್ರ ರಾಜೀನಾಮೆ ಬರೇ ವದಂತಿ-ಡಿಕೆಶಿ: ಶಾಸಕ ಎಸ್.ವಿ.ರಾಮಚಂದ್ರ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ವಿಷಯ ಕೇವಲ ವದಂತಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಪಕ್ಷ ಆಪರೇಷನ್ ಕಮಲ ಮುಂದುವರಿಸಿದೆ. ಆ ನಿಟ್ಟಿನಲ್ಲಿ ಬಿಜೆಪಿ ವಿರುದ್ಧ ತೀವ್ರ ಹೋರಾಟ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಕಾಂಗ್ರೆಸ್ ಶಾಸಕ ಎಸ್.ವಿ.ರಾಮಚಂದ್ರ ಅವರು ರಾಜೀನಾಮೆ ಪತ್ರ ಸಲ್ಲಿಸಿದರೂ ಕೂಡ ಸ್ಪೀಕರ್ ಅದನ್ನು ಸ್ವೀಕರಿಸಬಾರದು. ರಾಜ್ಯದಲ್ಲಿ ಆಪರೇಷನ್ ಕಮಲ ಮತ್ತೆ ಮುಂದುವರಿದಿದೆ. ಈ ಬಗ್ಗೆ ತಾವು ಗಮನಹರಿಸಬೇಕೆಂದು ಡಿಕೆಶಿ ಸ್ಪೀಕರ್ ಭೇಟಿ ವೇಳೆಯಲ್ಲಿ ಸಲಹೆ ನೀಡಿದ್ದಾರೆನ್ನಲಾಗಿದೆ.

ಸಿಎಂ ಮನೆ ಮುಂದೆ ಕಾಂಗ್ರೆಸ್ ಧರಣಿ: ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು ಮಂಗಳವಾರ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೇಸ್‌ಕೋರ್ಸ್ ನಿವಾಸದ ಎದುರು ಧರಣಿ ಆರಂಭಿಸಿದ್ದಾರೆ.

ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಪರೇಶನ್ ಕಮಲದ ವಿರುದ್ಧ ಧರಣಿ ನಡೆಸಲು ಕಾಂಗ್ರೆಸ್ ನಿರ್ಧಾರ ಕೈಗೊಂಡಿತ್ತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಧಿಕ್ಕಾರದ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ನಾವು ಆಪರೇಷನ್ ಕಮಲ ನಡೆಸಿಲ್ಲ-ಈಶ್ವರಪ್ಪ: ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಂದಿ ಅವರ ಶಾಸಕರು ರಾಜೀನಾಮೆ ನೀಡದರೆ ಅದಕ್ಕೆ ಆಪರೇಷನ್ ಕಮಲ ಅಂತ ಹೇಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದು ಯಾವ ನ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ನಾವು ಯಾವುದೇ ಆಪರೇಷನ್ ಕಮಲ ನಡೆಸಿಲ್ಲ. ಮೊದಲು ಕಾಂಗ್ರೆಸ್ ಮುಖಂಡರು ಬಿಜೆಪಿಯ 16 ಶಾಸಕರನ್ನು ಬಿಡುಗಡೆ ಮಾಡಲಿ. ನಮ್ಮ ಶಾಸಕರನ್ನು ಇಟ್ಟುಕೊಳ್ಳುವುದು ಸರಿ, ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ ಅದನ್ನು ಆಪರೇಷನ್ ಕಮಲ ಅಂತ ಹೇಳಿ ಪ್ರತಿಭಟನೆ ನಡೆಸುವುದು ಇದೆಂತಹ ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಿಗೆ ಮಾನ-ಮರ್ಯಾದೆ ಇದ್ದರೆ ಮೊದಲು ಗೃಹಬಂಧನದಲ್ಲಿ ಇರಿಸಿದ್ದ 16 ಮಂದಿ ಬಿಜೆಪಿ ಶಾಸಕರನ್ನು ಹೊರಬಿಡಲಿ ಎಂದರು. ಅಲ್ಲದೇ ನಾವು ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ