ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಬಾರ್ಷನ್ ಕಮಲ, ಆಪರೇಷನ್ ಕಮಲ; ಯಾವುದು ಸರಿ? (BJP | Congress | JDS | Karnataka)
Bookmark and Share Feedback Print
 
ಸುದ್ದಿ ವಿಶ್ಲೇಷಣೆ

ಹಗರಣಗಳಿಂದಲೇ ಮುಳುಗೇಳುತ್ತಿದ್ದ ಬಿ.ಎಸ್. ಯಡಿಯೂರಪ್ಪ ಸರಕಾರವನ್ನು ತನ್ನಷ್ಟಕ್ಕೆ ತಾನೇ ಉರುಳುವಂತೆ ಮಾಡುವುದನ್ನು ಬಿಟ್ಟು ಕಾಂಗ್ರೆಸ್-ಜೆಡಿಎಸ್‌ಗಳು ಮಾಡಿದ್ದು ಬಿಜೆಪಿಯ ಅದೇ ಅನೈತಿಕ ರಾಜಕಾರಣ. ಇದರಿಂದ ಬಚಾವ್ ಆಗಲು ಇದೀಗ ಕೇಸರಿ ಪಕ್ಷವು ಮತ್ತೊಂದು ಸುತ್ತು ಆಪರೇಷನ್ ಮಾಡಲು ಹೊರಟಿರುವಾಗ ಪ್ರತಿಪಕ್ಷಗಳು ಬೊಬ್ಬೆ ಹಾಕುತ್ತಿರುವುದು ಯಾಕೋ?

ಹೌದಲ್ಲ, ಇಂತಹ ಹಲವು ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರಲ್ಲಿ ಮೂಡುವುದು ಸಾಧ್ಯ. ಬಿಜೆಪಿ ಅಂದು ನಡೆಸಿದ 'ಆಪರೇಷನ್ ಕಮಲ'ವನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಅದು ಅನೈತಿಕ, ಅಕ್ರಮ, ಕಾನೂನು ಬಾಹಿರ, ಸಂವಿಧಾನ ವಿರೋಧಿ -- ಹೀಗೆ ಏನು ಬೇಕಾದರೂ ಕರೆಯಬಹುದು, ಪ್ರತಿಪಕ್ಷಗಳು ಕರೆದಿದ್ದವು ಕೂಡ.

ಆದರೆ ಕೆಲ ದಿನಗಳ ಹಿಂದೆ ಅದೇ ವಿಪಕ್ಷಗಳು ಮಾಡಿದ್ದೇನು? ಯಡಿಯೂರಪ್ಪ ಸರಕಾರದ 20ಕ್ಕೂ ಹೆಚ್ಚು ಶಾಸಕರನ್ನು ಅಕ್ರಮವಾಗಿ, ಅನಾಮತ್ತಾಗಿಸೆಳೆದುಕೊಂಡು, ಬಂಡೇಳುವಂತೆ ಮಾಡಿದ್ದು ಸರಿಯೇ? ಬಿಜೆಪಿ ಮಾಡಿದ್ದು ಅನೈತಿಕವಾದರೆ, ಕಾಂಗ್ರೆಸ್-ಜೆಡಿಎಸ್‌ಗಳದ್ದು ನೈತಿಕವೇ? ಮೊಯ್ಲಿಯವರು ಹೇಳಿದಂತೆ ಇದನ್ನೂ ನಿರ್ಧರಿಸಬೇಕಾಗಿರುವುದು ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿಯಲ್ಲ, ರಾಜ್ಯದ ವಿವೇಕಯುತ ಜನತೆ. ಮತದಾರರು ಇದಕ್ಕೆ ನೀಡಿರುವ ಹೆಸರು 'ಅಬಾರ್ಷನ್ ಕಮಲ'.

ಸರಕಾರವನ್ನು ಅಡ್ಡದಾರಿಯ ಮೂಲಕ 'ಅಬಾರ್ಷನ್ ಕಮಲ' ಮಾಡಿ ಅಲ್ಪಮತಕ್ಕೆ ಕುಸಿಯುವಂತೆ ಮಾಡಿದ ನಂತರ ಬಿಜೆಪಿಗೂ ತನ್ನ 'ಆಪರೇಷನ್ ಕಮಲ' ಅನೈತಿಕವೆಂಬ ಟೀಕೆಯ ವಿರುದ್ಧ ಸಮರ್ಥಿಸಲು ಕಾರಣಗಳು ಸಿಕ್ಕಿದವು ಮತ್ತು ಅದೇ ಹೊತ್ತಿಗೆ ಸರಕಾರಕ್ಕೂ ಮತ್ತೊಂದು ಆಪರೇಷನ್ ಕಮಲದ ಅಗತ್ಯವಿತ್ತು.

ಅದರಂತೆ ಮಾಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‌ಗಳ ತಲಾ ಒಬ್ಬೊಬ್ಬ ಶಾಸಕರನ್ನು ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಒಂದಷ್ಟು ಶಾಸಕರು ಇದೇ ಹಾದಿ ತುಳಿಯಲಿದ್ದಾರೆ ಎನ್ನುವುದು ಬಿಜೆಪಿ ವಲಯದಲ್ಲೇ ತೇಲುತ್ತಿರುವ ಸುದ್ದಿ.

ನಮ್ಮದು ಧರ್ಮದ ಹಾದಿ, ನ್ಯಾಯದ ಹಾದಿ; ಆಡಳಿತ ಪಕ್ಷದ ಶಾಸಕರನ್ನು ಸೆಳೆದುಕೊಂಡು ನಾವು ಮಾಡುತ್ತಿರುವುದು ಧರ್ಮ ಯುದ್ಧ ಎಂದೆಲ್ಲಾ ಸಿಕ್ಕಸಿಕ್ಕ ವೇದಿಕೆಗಳಲ್ಲಿ ಹೇಳುತ್ತಾ ತಿರುಗುತ್ತಿದ್ದ ಕಾಂಗ್ರೆಸ್-ಜೆಡಿಎಸ್‌ಗಳು ಆಘಾತಕ್ಕೊಳಗಾಗಿವೆ. ಅದರಂತೆ ನಿನ್ನೆ ಸಂಜೆ ಸಿಎಂ ನಿವಾಸದ ಎದುರು ಪ್ರತಿಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಪಕ್ಷಗಳು ಈ ವಿಚಾರದ ಕುರಿತು ಪ್ರತಿಭಟನೆ ನಡೆಸುವ ನೈತಿಕತೆಯನ್ನು ಉಳಿಸಿಕೊಂಡಿವೆಯೇ ಎನ್ನುವುದು ಇಲ್ಲಿ ಮೂಡುವ ಮತ್ತೊಂದು ಪ್ರಶ್ನೆ.

ಅಷ್ಟಕ್ಕೂ ಬಿಜೆಪಿ 'ಆಪರೇಷನ್ ಕಮಲ' ಮಾಡಿ ವಿಪಕ್ಷಗಳ ಶಾಸಕರನ್ನು ಸೆಳೆದುಕೊಂಡದ್ದು ರಾಜೀನಾಮೆ ಕೊಡಿಸಿಯೇ ಹೊರತು, ಈಗ ಕಾಂಗ್ರೆಸ್-ಜೆಡಿಎಸ್ ಮಾಡಿರುವ 'ಅಪಹರಣ' ರಾದ್ದಾಂತಗಳ ವಿಧಾನದಿಂದಲ್ಲ. ಸರಕಾರವನ್ನು ರಕ್ಷಿಸುವುದಕ್ಕೋಸ್ಕರ ಬಿಜೆಪಿ ಮತ್ತೆ ಕಣಕ್ಕಿಳಿದಿದೆ. ಅದು ನೈತಿಕವೋ, ಅನೈತಿಕವೋ ಬೇರೆ ಪ್ರಶ್ನೆ. ಆದರೆ ಆಪರೇಷನ್ ಕಮಲ ಮತ್ತೆ ಆರಂಭವಾಗಿರುವುದಂತೂ ನಿಜ.

ಇಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸುವ ನೈತಿಕತೆಯನ್ನೇ ವಿಪಕ್ಷಗಳು ಕಳೆದುಕೊಂಡಿರುವಾಗ ಬಿಜೆಪಿಯದ್ದು ಆನೆ ನಡೆದದ್ದೇ ದಾರಿ. ಕೆಐಎಡಿಬಿ ಮತ್ತು ಬಿಡಿಎ ಭೂ ಹಗರಣಗಳಲ್ಲಿ ಸ್ವತಃ ಮುಖ್ಯಮಂತ್ರಿ, ಅವರ ಕುಟುಂಬ, ಸಂಪುಟ ಸಚಿವರು, ಸಚಿವರುಗಳ ಪುತ್ರರತ್ನಗಳು ಪಾಲ್ಗೊಂಡಿರುವಂತಹ ಸನ್ನಿವೇಶಗಳಲ್ಲಿ ಹಗರಣದ ಹೂರಣವನ್ನು ಬಯಲು ಮಾಡುವುದನ್ನು ಬಿಟ್ಟು ಕುರ್ಚಿಯ ಆಸೆಗಾಗಿ 'ಅಬಾರ್ಷನ್ ಕಮಲ' ಮಾಡಲು ಹೋಗಿದ್ದನ್ನು ವಿಪಕ್ಷಗಳು ಜನತೆಯ ಮುಂದೆ ಯಾವ ಪದಗಳಲ್ಲಿ ಸಮರ್ಥಿಸಿಕೊಳ್ಳುತ್ತಿವೆ?

ಕರ್ನಾಟಕದ ರಾಜಕಾರಣ ಯಾವತ್ತೋ ಕುಲಗೆಟ್ಟು ಹೋಗಿದೆ. ಅದಕ್ಕೆ ಬಿಜೆಪಿಯೊಂದೇ ಕಾರಣವಲ್ಲ. ನಿಜವಾಗಿಯೂ ಕಾಂಗ್ರೆಸ್-ಜೆಡಿಎಸ್‌ಗಳಿಗೆ ಜನ ನೀಡಿದ ತೀರ್ಪಿನ ಮೇಲೆ ಗೌರವ ಇದ್ದಿದ್ದೇ ಆಗಿದ್ದಿದ್ದರೆ ಅಂದು ಧರಂ ಸಿಂಗ್ ಮುಖ್ಯಮಂತ್ರಿಯಾಗುತ್ತಿರಲಿಲ್ಲ.

ಕೊಳಕೆನ್ನುವುದು ಕರ್ನಾಟಕದ ಯಾವುದೇ ರಾಜಕೀಯ ಪಕ್ಷವನ್ನೂ ಬಿಡದೆ ಕುಲಗೆಡಿಸಿದೆ. ಸದ್ಯದ ಮಟ್ಟಿಗೆ ಇದಕ್ಕೊಂದು ಬ್ರೇಕ್ ಬೇಕಿದ್ದರೆ ಬಹುಶಃ ಮತ್ತೊಂದು ಮಣಭಾರದ ಚುನಾವಣೆಯೇ ನಡೆಯಬೇಕೋ, ಏನೋ?
ಸಂಬಂಧಿತ ಮಾಹಿತಿ ಹುಡುಕಿ