ಜನ ಕ್ಷಮಿಸಬಹುದು; ದೇವರು ಕ್ಷಮಿಸಲ್ಲ: ಕಾಂಗ್ರೆಸ್‌ಗೆ ಸಿಎಂ
ಬೆಂಗಳೂರು, ಬುಧವಾರ, 20 ಅಕ್ಟೋಬರ್ 2010( 12:42 IST )
NRB
'ಸಿದ್ದರಾಮಯ್ಯ, ದೇಶಪಾಂಡೆಯವರೇ ನಿಮ್ಮ ಪಾಪದ ಕೊಡ ತುಂಬಿದೆ. ಜನ ನಿಮ್ಮನ್ನು ಕ್ಷಮಿಸಬಹುದು, ಆದರೆ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ'...ಇದು ವಿಪಕ್ಷ ಮುಖಂಡರ ನಡವಳಿಕೆ ವಿರುದ್ಧ ರೋಸಿಹೋಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ ಪರಿ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜನ ಪ್ರಬುದ್ಧರಾಗಿದ್ದಾರೆ. ಪ್ರತಿಪಕ್ಷಗಳ ಬ್ಲ್ಯಾಕ್‌ಮೇಲ್ ತಂತ್ರ ನಡೆಯೋದಿಲ್ಲ ಎಂಬುದನ್ನು ಸಿದ್ದರಾಮಯ್ಯ ಸೇರಿದಂತೆ ವಿಪಕ್ಷ ಮುಖಂಡರು ತಿಳಿದುಕೊಳ್ಳಬೇಕು ಎಂದರು.
ಬೆಂಗಳೂರು ಸುತ್ತಮುತ್ತ ಭೂ ಹಗರಣದಲ್ಲಿ ನಾನು ಶಾಮೀಲಾಗಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದೇಶಪಾಂಡೆ ಆರೋಪಿಸುತ್ತಿದ್ದಾರೆ. ಹಾಗಾದರೆ ನಿಮ್ಮಲ್ಲಿ ದಾಖಲೆ ಇದ್ದರೆ ಬಹಿರಂಗಪಡಿಸಿ, ನಾನು ಯಾವುದೇ ತನಿಖೆಗೂ ಸಿದ್ದ ಎಂದು ಸವಾಲು ಹಾಕಿದರು.
ಬೆಂಗಳೂರು ಸುತ್ತಮುತ್ತ ಸಾಕಷ್ಟು ಭೂ ಹಗರಣ ನಡೆದಿದೆ. ಅದರಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷವೇ ಶಾಮೀಲಾಗಿದೆ ಎಂದು ದೂರಿರುವ ಮುಖ್ಯಮಂತ್ರಿಗಳು, ಆ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳನ್ನು ನೇಮಿಸಿ ವಿಪಕ್ಷ ಮುಖಂಡರ ಹಗರಣ ಬಯಲು ಮಾಡುವುದಾಗಿ ಕಿಡಿಕಾರಿದರು.
ನಮ್ಮ(ಬಿಜೆಪಿ) ಶಾಸಕರನ್ನು ಒತ್ತೆ ಇಟ್ಟುಕೊಂಡು, ನನ್ನ ಮನೆ ಮುಂದೆ ಧರಣಿ ನಡೆಸಲು ನಿಮಗೆ ಯಾವ ಯೋಗ್ಯತೆ ಇದೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ನೀವು ನಮ್ಮ ಮನೆ ಬಾಗಿಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಿ. ಮೊದಲು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮ್ಮ ಪಾಪದ ಕೊಡ ತುಂಬಿದ್ದು, ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.