ಆಡುಭಾಷೆಯಾಗಿದ್ದ ಕನ್ನಡ ಭಾಷೆಗೆ ಸಾಹಿತ್ಯ ಹಾಗೂ ಲಿಪಿಯ ಸ್ವರೂಪ ಕೊಟ್ಟವರು ಜೈನ ವಿದ್ವಾಂಸರು ಎಂದು ಹಿರಿಯ ವಿದ್ವಾಂಸ, ನಾಡೋಜ ಪ್ರೊ.ಹಂಪನಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವಿಜಾಪುರದ ಮಹಿಳಾ ವಿವಿಯ ಕನ್ನಡ ಅಧ್ಯಯನ ವಿಭಾಗ ಮತ್ತು ಮೀರತ್‌ನ ಉತ್ತರ ಪ್ರದೇಶ ಶ್ರುತ ಸಂವರ್ಧನ ಸಂಸ್ಥಾನಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕನ್ನಡ ಜೈನ ಸಾಹಿತ್ಯ-ಸಂಸ್ಕೃತಿ ಮತ್ತು ಮಹಿಳೆ ಕುರಿತ 2 ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಕ್ರಿ.ಶ. 860ರಲ್ಲೇ ತಮಿಳುನಾಡಿನ ವೇಡಾಲ್‌ನಲ್ಲಿ ಮಹಿಳಾ ವಿವಿ ಸ್ಥಾಪಿಸಲಾಗಿತ್ತು ಎಂದರು.
ಜಗತ್ತಿನಲ್ಲೇ ಮೊದಲ ಬಾರಿಗೆ ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತಿ ಜೈನ ಸಮುದಾಯಕ್ಕೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಆರಂಭವಾಗಿದ್ದೇ ಜೈನ ಆಚಾರ್ಯರಿಂದ ಎಂದು ವಿಶ್ಲೇಷಿಸಿದರು.
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸ್ಥಾಪನೆಯಾಗಿದ್ದ ಈ ವಿವಿಯಲ್ಲಿ 900 ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದರು. ಕುಲಪತಿಗಳಾಗಿ ಕನಕ ಕುರತ್ತಿಯಾರ್ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪ್ರೊ.ಹಂಪನಾ ವಿವರಿಸಿದರು.
ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಎರಕ ಹೊಯ್ದ ಕನ್ನಡ ಭಾಷೆ ತ್ರಿವೇಣಿ ಸಂಗಮ. ಸರಕಾರಗಳು ಸಂಸ್ಕೃತ ಭಾಷೆಗೆ ನೀಡಿದ ಮಹತ್ವವನ್ನು ಪ್ರಾಕೃತ ಭಾಷೆಗೆ ನೀಡದೆ ನಿರ್ಲಕ್ಷ್ಯ ಮಾಡಿವೆ. ಇದು ಪ್ರಾಕೃತ ಭಾಷೆಗೆ ನಾವು ಮಾಡಿದ ಅನ್ಯಾಯ ಎಂದು ಹಂಪನಾ ವಿಷಾದ ವ್ಯಕ್ತಪಡಿಸಿದರು.