2 ತಿಂಗಳು ಸಿಎಂ ಕುರ್ಚಿ ಬಿಟ್ಟು ಕೊಡಿ: ಮಲ್ಲಿಕಾರ್ಜುನ ಖರ್ಗೆ
ಮಾನ್ವಿ, ಬುಧವಾರ, 20 ಅಕ್ಟೋಬರ್ 2010( 14:51 IST )
'ಮುಖ್ಯಮಂತ್ರಿ ಯಡಿಯೂರಪ್ಪಗೆ ಆಡಳಿತದ ಸಾಮಾನ್ಯ ಜ್ಞಾನ ಇಲ್ಲ. ಅಭಿವೃದ್ಧಿ ಎಂಬುದು ಅವರಿಗೆ ಮೊದಲೇ ಗೊತ್ತಿಲ್ಲ. 2 ತಿಂಗಳು ಸಿಎಂ ಕುರ್ಚಿ ಬಿಟ್ಟುಕೊಡಲಿ. ಹುದ್ದೆ ಹೇಗೆ ನಿಭಾಯಿಸಬೇಕು ಎಂಬುದನ್ನು ತೋರಿಸುತ್ತೇನೆ.' ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹರಿಹಾಯುತ್ತಲೇ, ಮುಖ್ಯಮಂತ್ರಿಗೆ ಸಲಹೆ ನೀಡಿದವರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ.
ಸೋಮವಾರ ರಾತ್ರಿ ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇದುವರೆಗೆ ಸಚಿವನಾಗಿ ಆಯಾ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ಒಟ್ಟಾರೆ ಅಭಿವೃದ್ಧಿಗೆ ಸಿಎಂ ಹುದ್ದೆ ಮುಖ್ಯ. ಹೀಗಾಗಿ ಹೈದರಾಬಾದ್ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಗಮನಹರಿಸಲು ಆಗಿಲ್ಲ. ಮುಖ್ಯಮಂತ್ರಿಯಾದರೆ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿ ಎಂಬುದನ್ನು ಹೊರಹಾಕಿದರು.
60 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ತುಂಗಭದ್ರಾ, ಆಲಮಟ್ಟಿ, ಹಾರಂಗಿ ಮುಂತಾದ ಜಲಾಶಯಗಳು, ಕಾಲುವೆಗಳು, ರಸ್ತೆಗಳ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆ, ಬಿಸಿಯೂಟ ಜಾರಿಗೆ ತಂದಿದ್ದು ಯಾರು? ಬಿಜೆಪಿ ಸರಕಾರ ಕೇವಲ ಎರಡೂವರೆ ವರ್ಷದಲ್ಲಿ ರಾಜ್ಯವನ್ನು ಪೂರ್ತಿ ಬರ್ಬಾದ್ ಮಾಡಿದ್ದು ಜನರ ಕಣ್ಣಿಗೆ ಕಾಣಿಸುತ್ತಿದೆ. ಇವುಗಳ ದುರಸ್ತಿ ಮಾಡಲು ಬಿಜೆಪಿ ಸರಕಾರಕ್ಕೆ ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ತುಂಗಭದ್ರಾ ಎಡದಂಡೆ ಕಾಲುವೆ ಅರೆ ಬರೆ ದುರಸ್ತಿ ಮಾಡಿ 3 ತಿಂಗಳಲ್ಲಿ 300 ಕೋಟಿ ರೂ. ಎತ್ತುವಳಿ ಮಾಡಲಾಗಿದೆ. ಕಮಿಷನ್ ನೀಡಲಾಗದೆ ಗುತ್ತಿಗೆದಾರರು ಹಣ ಪಡೆಯಲಾಗಿಲ್ಲ. ಈ ಸರಕಾರದ ಅವಯಲ್ಲಿ ಪರ್ಸೆಂಟೇಜ್ ಹಾವಳಿ ಮಿತಿ ಮೀರಿ ಅಭಿವೃದ್ದಿಗೆ ತೀವ್ರ ಹಿನ್ನಡೆಯಾಗಿದೆ. ರಾಜ್ಯದ ಹಿತಾಸಕ್ತಿಯಿಂದ ಯಡಿಯೂರಪ್ಪ ಸರಕಾರ ಆದಷ್ಟು ಬೇಗ ತೊಲಗಬೇಕು. ಕೇಂದ್ರದ ಅನುದಾನ ಬಳಸಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.