ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಬಯಸಿದ್ರೆ ಎಲ್ಲಾ ಶಾಸಕರು ರಾಜೀನಾಮೆಗೆ ಸಿದ್ದ: ಎಚ್‌ಡಿಕೆ (BJP | Yeddyurappa | Kumaraswamy | JDS | Congress | Deve gowda)
ಸಿಎಂ ಬಯಸಿದ್ರೆ ಎಲ್ಲಾ ಶಾಸಕರು ರಾಜೀನಾಮೆಗೆ ಸಿದ್ದ: ಎಚ್‌ಡಿಕೆ
ಬೆಂಗಳೂರು, ಬುಧವಾರ, 20 ಅಕ್ಟೋಬರ್ 2010( 16:00 IST )
NRB
ರಾಜ್ಯದಲ್ಲಿ ಪ್ರತಿಪಕ್ಷಗಳು ಬೇಡ, ಅವರಿಂದ ತೊಂದರೆಯಾಗುತ್ತಿದೆ. ಹಾಗಾಗಿ ಪ್ರತಿಪಕ್ಷ ಶಾಸಕರು ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕವಾಗಿ ಘೋಷಣೆ ಮಾಡಲಿ. ಆಗ ಜೆಡಿಎಸ್ ಪಕ್ಷದ 27 ಶಾಸಕರಿಂದ ಸಾಮೂಹಿಕ ರಾಜೀನಾಮೆ ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲೊಂದನ್ನು ಹಾಕಿದ್ದಾರೆ.
ಬುಧವಾರ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಪಕ್ಷದ ಆಪರೇಷನ್ ಕಮಲದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅನಾವಶ್ಯಕವಾಗಿ ಹಣದ ಥೈಲಿ ಹಿಡಿದು ಶಾಸಕರ ಖರೀದಿ ಮಾಡುವ ಬದಲು, ಪ್ರತಿಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಟ್ಟು ಸಹಕರಿಸಲಿ ಅಂತ ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಲಿ. ಆಗ ಜೆಡಿಎಸ್ ಶಾಸಕರೆಲ್ಲ ಸಾಮೂಹಿಕ ರಾಜೀನಾಮೆ ನೀಡಲು ಸಿದ್ದ ಎಂದರು.
ಇದರಿಂದಾಗಿ ರಾಜ್ಯದಲ್ಲಿ ಪ್ರತಿಪಕ್ಷಗಳೇ ಬೇಡ, ಬಿಜೆಪಿ ಶಾಸಕರು ಮಾತ್ರ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಅಲ್ಲದೆ, ಪ್ರತಿಪಕ್ಷಗಳ ಅಡ್ಡಿ, ಆತಂಕ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಪ್ರಸ್ತುತ ರಾಜ್ಯ ರಾಜಕಾರಣದ ವಿದ್ಯಮಾನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇರ ಹೊಣೆ ಎಂದು ಆರೋಪಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳೇ ಆಪರೇಷನ್ ಕಮಲಕ್ಕೆ ಚಾಲನೆ ಸಿಕ್ಕಿದ್ದು, ಅದೀಗ ಎರಡನೇ ಬಾರಿಗೂ ಮುಂದುವರಿದಿದೆ. ಇದರಿಂದಾಗಿ 110 ಶಾಸಕರನ್ನು ಹೊಂದಿದ್ದ ಬಿಜೆಪಿ ಸರಕಾರದ ಬಲ ಈಗ 106ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ 80-85ಕ್ಕೆ ಕುಸಿಯಲು ಕಾರಣವಾಗಬಹುದು ಎಂದು ಭವಿಷ್ಯ ನುಡಿದರು.
ಕಳೆದ ಬಾರಿ ಸಚಿವ ಜನಾರ್ದನ ರೆಡ್ಡಿ ಪಟಾಲಂ ಬಿಜೆಪಿ ಶಾಸಕರನ್ನೇ ಹೈಜಾಕ್ ಮಾಡಿ ಹೈದರಾಬಾದ್‌ನಲ್ಲಿ ಠಿಕಾಣಿ ಹೂಡಿದ ಸಂದರ್ಭದಲ್ಲಿ ಒಂದು ತಿಂಗಳ ಕಾಲ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಅಲ್ಲದೇ ಅವರದ್ದೇ ಪಕ್ಷದ ಸಚಿವರು ಮುಖ್ಯಮಂತ್ರಿಗಳನ್ನು ಕಂಸ, ರಾವಣ ಎಂದು ಬಹಿರಂಗವಾಗಿ ಜರೆದಿದ್ದರು. ಇದಕ್ಕೆಲ್ಲಾ ವಿರೋಧ ಪಕ್ಷವೇ ಕಾರಣವೇ ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲ ಇತ್ತೀಚೆಗೆ ಬಿಜೆಪಿ ಶಾಸಕರು ಚೆನ್ನೈ, ಗೋವಾ ರೆಸಾರ್ಟ್‌ಗಳಲ್ಲಿ ಠಿಕಾಣಿ ಹೂಡಿದ್ದು, ಮುಖ್ಯಮಂತ್ರಿಗಳ ಮೇಲಿನ ಅಸಮಾಧಾನದಿಂದ ವಿನಃ ಪ್ರತಿಪಕ್ಷಗಳು ಅವರನ್ನು ಬಲವಂತವಾಗಿ ರೆಸಾರ್ಟ್‌ಗೆ ಕರೆದುಕೊಂಡು ಹೋಗಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು, ಗೃಹ ಸಚಿವ ಅಶೋಕ್ ಅರಿಯಬೇಕು. ನಾವು ಯಾವ ಶಾಸಕರನ್ನೂ ಗೃಹ ಬಂಧನದಲ್ಲಿ ಇಟ್ಟಿಲ್ಲ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.