ಬಿಜೆಪಿ 11 ಶಾಸಕರ ಅನರ್ಹತೆ ವಿಚಾರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪರ ಮೂವರು ವಕೀಲರು ಮಂಡಿಸಿದ ವಾದವನ್ನು ಹೈಕೋರ್ಟ್ ವಿಭಾಗೀಯ ಏಕಸದಸ್ಯ ಪೀಠದ ನ್ಯಾಯಮೂರ್ತಿ ವಿ.ಜಿ.ಸಭಾಹಿತ್ ಆಲಿಸಿದ ನಂತರ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.
ಬಿಜೆಪಿಯ 11 ಶಾಸಕರ ಪರವಾಗಿ ವಕೀಲರಾದ ಕೆ.ಜಿ.ರಾಘವನ್, ಬಿ.ವಿ.ಆಚಾರ್ಯ ಹಾಗೂ ರವಿಕುಮಾರ್ ವರ್ಮಾ ಅವರು ಶಾಸಕರು ರಾಜ್ಯಪಾಲರಿಗೆ ನೀಡಿದ್ದ ಪತ್ರ, ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರೆದ ಪತ್ರ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ವಾದ ಮಂಡಿಸಿದರು.
ಇಂದು ಬೆಳಿಗ್ಗೆ ಪ್ರಕರಣದ ಕುರಿತಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ಆರಂಭಗೊಂಡಿತ್ತು. ಸಂಜೆ ತನಕ ಮೂವರು ವಕೀಲರು ಶಾಸಕರ ಪರವಾಗಿ ವಾದ ಮಂಡಿಸಿದ್ದನ್ನು ನ್ಯಾ.ವಿ.ಜಿ.ಸಭಾಹಿತ್ ಆಲಿಸಿದ ನಂತರ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ನಾಳೆ ಸರಕಾರದ ಪರವಾಗಿ ಮಾಜಿ ಜನರಲ್ ಸೋಲಿ ಸೊರಾಬ್ಜಿ ಅವರು ವಾದ ಮಂಡಿಸಲಿದ್ದಾರೆ. ಅವರ ವಾದ ಪೂರ್ಣಗೊಂಡ ನಂತರ, ನ್ಯಾ.ಸಭಾಹಿತ್ ಅಂತಿಮ ತೀರ್ಪನ್ನು ನೀಡಲಿದ್ದಾರೆ.
ಬಿಜೆಪಿಯ 11 ಶಾಸಕರ ಅನರ್ಹತೆ ವಿಚಾರದಲ್ಲಿ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಎನ್.ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು. ಆ ನಿಟ್ಟಿನಲ್ಲಿ ಅಂತಿಮ ತೀರ್ಪು ನೀಡಲು ಮೂರನೇ ನ್ಯಾ.ವಿ.ಜಿ.ಸಭಾಹಿತ್ ಅವರಿಗೆ ವರ್ಗಾಯಿಸಲಾಗಿತ್ತು.
11 ಶಾಸಕರ ಅನರ್ಹತೆ ಪ್ರಕರಣದ ಕುರಿತು ಮುಖ್ಯನ್ಯಾಯಮೂರ್ತಿ ಖೇಹರ್ ಹಾಗೂ ನ್ಯಾ.ಎನ್.ಕುಮಾರ್ ವಿಭಿನ್ನ ತೀರ್ಪು ನೀಡಿದ್ದರು. ನಾಲ್ಕು ಅಂಶಗಳಲ್ಲಿ ಮೂರು ಅಂಶಗಳ ಬಗ್ಗೆ ಇಬ್ಬರೂ ನ್ಯಾಯಮೂರ್ತಿಗಳು ಸಮಾನ ಅಭಿಪ್ರಾಯ ಹೊಂದಿದ್ದರೆ. ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸಿದ ಒಂದು ಅಂಶದ ಬಗ್ಗೆ ಖೇಹರ್ ಸಹಮತ ವ್ಯಕ್ತಪಡಿಸಿದ್ದರೆ, ನ್ಯಾ.ಕುಮಾರ್ ತಿರಸ್ಕರಿಸಿದ್ದರು. ಇದರಿಂದಾಗಿ ತೀರ್ಪನ್ನು ಮೂರನೇ ನ್ಯಾಯಮೂರ್ತಿ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಇಬ್ಬರು ನ್ಯಾಯಮೂರ್ತಿಗಳು ನೀಡಿದ್ದ ತೀರ್ಪಿನಲ್ಲಿ ಒಬ್ಬರ ತೀರ್ಪನ್ನು ನ್ಯಾ.ಸಭಾಹಿತ್ ಅಂತಿಮ ತೀರ್ಪನ್ನಾಗಿ ನೀಡಬೇಕಾಗಿದೆ.