ಯಡಿಯೂರಪ್ಪ ನಾಯಕತ್ವ ಬೇಡ ; ಬಿಜೆಪಿ ತೊರೆದಿಲ್ಲ: ಜಾರಕಿಹೊಳಿ
ಬೆಂಗಳೂರು, ಬುಧವಾರ, 20 ಅಕ್ಟೋಬರ್ 2010( 20:40 IST )
NRB
'ನಾವು ಬಿಜೆಪಿ ಪಕ್ಷವನ್ನು ತೊರೆದಿಲ್ಲ. ನಮಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಶ್ವಾಸವಿಲ್ಲ. ಹಾಗಾಗಿ ರಾಜ್ಯದ ಜನರ ಹಿತದೃಷ್ಟಿಯಿಂದ ಹೋರಾಟ ಮಾಡುತ್ತಿದ್ದೇವೆ' ಎಂದು ಅನರ್ಹಗೊಂಡ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅನರ್ಹಗೊಂಡ 11 ಮಂದಿ ಬಿಜೆಪಿ ಶಾಸಕರು ಬುಧವಾರ ಸಂಜೆ ದಿಢೀರನೆ ಗೋಲ್ಡನ್ ಪಾಮ್ಸ್ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದು ಕಾನೂನು ಬಾಹಿರ. ನಾವೇನೂ ಬಿಜೆಪಿ ಪಕ್ಷವನ್ನು ತೊರೆದಿಲ್ಲ. ಯಡಿಯೂರಪ್ಪ ವಿರುದ್ಧ ಮಾತ್ರ ನಾವು ಅಸಮಾಧಾನ ವ್ಯಕ್ತಪಡಿಸಿದ್ದೇವು. ಆದರೆ ನಮ್ಮನ್ನು ಏಕಾಏಕಿ ಅನರ್ಹಗೊಳಿಸಿದ್ದು ತಪ್ಪು ಎಂದು ಜಾರಕಿಹೊಳಿ ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ರಾಜ್ಯಾಧ್ಯಕ್ಷರ ಜೊತೆ ಮಾತನಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹೈಕಮಾಂಡ್ ಕರೆದರೆ ಮಾತುಕತೆಗೆ ಸಿದ್ದ ಎಂದರು. ಅಷ್ಟೇ ಅಲ್ಲ ನಮ್ಮನ್ನು ಯಾರೂ ಗೃಹಬಂಧನದಲ್ಲಿ ಇರಿಸಿಲ್ಲ, ನಾವು ನಮ್ಮ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇವೆ. ಅನಾವಶ್ಯಕವಾಗಿ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿರುವುದಾಗಿ ದೂರಿದರು.
ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಗೋವಾದಲ್ಲಿ ಭದ್ರತೆ ಒದಗಿಸಲು ನಾವೇ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನರ್ಹತೆ ಪ್ರಕರಣದ ಕುರಿತಂತೆ ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೂ ರೆಸಾರ್ಟ್‌ನಲ್ಲಿಯೇ ಇರುತ್ತೇವೆ. ಒಂದು ವೇಳೆ ನಮ್ಮ ವಿರುದ್ಧ ತೀರ್ಪು ಬಂದರೆ ಆಗ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ. ನಮ್ಮ ಬೇಡಿಕೆ ಇರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ನಮಗೆ ಬೇಡ ಅಷ್ಟೇ ಎಂದರು.
ಕಾಲ ಮಿಂಚಿ ಹೋಗಿದೆ-ಸಿಎಂ: ಬಿಜೆಪಿ ಹೈಕಮಾಂಡ್ ಕರೆದರೆ ಮಾತುಕತೆಗೆ ಸಿದ್ದ ಎಂಬ 11 ಮಂದಿ ಶಾಸಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗಾಗಲೇ ಕಾಲ ಮಿಂಚಿ ಹೋಗಿದೆ. ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ನಾವು ಕೋರ್ಟ್ ತೀರ್ಪನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.