ನಾಡು ಕಂಡ ಅತ್ಯುತ್ತಮ ಆಡಳಿತಗಾರರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಕೂಡ ಒಬ್ಬರು ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಯಾವುದೇ ರಾಜಕೀಯ ಅನುಭವ ಇಲ್ಲದೇ ಇದ್ದರೂ ತನ್ನದೇ ಶೈಲಿಯಲ್ಲಿ ಸರಕಾರವನ್ನು ಮುನ್ನಡೆಸಿದ ರೀತಿ ಅವರಿಗೆ ಕೀರ್ತಿಯಾಗಿತ್ತು.
ಆಗಿನ ಕುಮಾರಸ್ವಾಮಿ ಎಲ್ಲಿ? ಈಗಿನ ಕುಮಾರಸ್ವಾಮಿ ಎಲ್ಲಿ? ಕೋಮುವಾದ ಎಂಬುದರ ಅರ್ಥವೇ ತನಗೆ ಗೊತ್ತಿಲ್ಲ ಎಂದು ಬಿಜೆಪಿ ಜತೆ ಸ್ನೇಹ ಮಾಡಿಕೊಂಡಾಗ ಹೇಳಿಕೊಂಡು ಹಲವರಿಂದ ವಾಸ್ತವವಾದಿ ಎಂದು ಬೆನ್ನು ತಟ್ಟಿಸಿಕೊಂಡಿದ್ದ ಅವರು ಇತರ ರಾಜಕಾರಣಿಗಳಂತೆ ಅಥವಾ ಅವರನ್ನೂ ಮೀರಿಸುವಂತೆ ಈ ರೀತಿಯಾಗಿ ಬೆಳೆದು ನಿಂತದ್ದು ಕರ್ನಾಟಕದ ಮತ್ತೊಂದು ದುರಂತ.
NRB
ಚಿತ್ರೋದ್ಯಮದಲ್ಲಿ ಅಷ್ಟಿಷ್ಟು ಸಂಪಾದಿಸುತ್ತಾ ತಿರುಗಾಡುತ್ತಿದ್ದ ಕುಮಾರಸ್ವಾಮಿಯವರನ್ನು ಸ್ವತಃ ಎಚ್.ಡಿ. ದೇವೇಗೌಡರೂ ರಾಜಕಾರಣಕ್ಕೆ ಬೇಕಾಗುವ ಪ್ರಮುಖ ಸರಕು ಎಂದು ಪರಿಗಣಿಸಿರಲಿಲ್ಲ. ಅವರ ಮುಂದಿದ್ದುದು ಹಿರಿಯ ಮಗ ಎಚ್.ಡಿ. ರೇವಣ್ಣ. ಆದರೆ ಅದ್ಯಾವ ಘಳಿಗೆಯಲ್ಲಿ ಶಾಸಕರನ್ನು ಸೆಳೆದುಕೊಂಡರೋ ಗೊತ್ತಿಲ್ಲ. ಆದರೆ ಕೆಲವೇ ದಿನಗಳಲ್ಲಿ ಬಿಜೆಪಿ ಜತೆ ಸರಕಾರ ರಚಿಸಿ ಮುಖ್ಯಮಂತ್ರಿಯೂ ಆಗಿಬಿಟ್ಟರು ಕುಮಾರಣ್ಣ.
ರಾಜಕೀಯದ ಎಬಿಸಿಡಿ ಗೊತ್ತಿಲ್ಲದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡುವುದೇನು ಎಂದು ಆ ಹೊತ್ತಿನಲ್ಲಿ ಬಹುತೇಕ ಮಂದಿ ಅಂದುಕೊಂಡಿದ್ದರು. ಅವೆಲ್ಲವನ್ನೂ ಕೆಲವೇ ತಿಂಗಳುಗಳಲ್ಲಿ ಬುಡಮೇಲು ಮಾಡಿದ ಕೀರ್ತಿ ಕುಮಾರಸ್ವಾಮಿಯದ್ದು. ಜನತಾ ದರ್ಶನ, ಗ್ರಾಮ ವಾಸ್ತವ್ಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾನು ಜನರ ಮುಖ್ಯಮಂತ್ರಿ ಎಂಬುದನ್ನು ತೋರಿಸಿ ಕೊಟ್ಟಿದ್ದರು.
ಇದೇ ರೀತಿ ಮುಂದುವರಿದರೆ ಇನ್ನು ಇತರ ಪಕ್ಷಗಳಿಗೆ ಉಳಿಗಾಲವಿಲ್ಲ ಎಂಬ ಸಂದೇಶವೂ ರವಾನೆಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಖ್ಯಾತಿ ಮುಗಿಲು ಮುಟ್ಟಿತ್ತು.
ಇದಕ್ಕೊಂದಿಷ್ಟು ಅಧಿಕಾರದ ಮದವೂ ಸೇರಿರಬೇಕು. ಒಂದೇ ಏಟಿಗೆ ಎಲ್ಲವನ್ನೂ ಮುಗಿಸಿ ಬಿಟ್ಟರು. ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವುದು ಸಾಧ್ಯವೇ ಇಲ್ಲ ಎಂದು ಖಂಡಾತುಂಡವಾಗಿ ಹೇಳಿ ಕಷ್ಟಪಟ್ಟು ಸಂಪಾದಿಸಿದ್ದನ್ನು ಸುಲಭವಾಗಿ ಕಳೆದುಕೊಳ್ಳುವ ಹಾದಿಯನ್ನು ಹಿಡಿದರು.
ಬಿಜೆಪಿ ಜತೆ ಸಖ್ಯ ಬೆಳೆಸಿದಾಗ ಆರಂಭದಲ್ಲಿ ಮುನಿಸಿಕೊಂಡಿದ್ದ ಗೌಡರು ಮಗನನ್ನು ನಿಧಾನವಾಗಿ ಒಲಿಸಿಕೊಂಡು ತನ್ನ ರಾಜಕೀಯ ತಂತ್ರಗಳ ಪಾಠಗಳನ್ನು ಹೇಳಿದರೋ ಏನೋ, ಕುಮಾರಸ್ವಾಮಿಯಂತೂ ಸಂಪೂರ್ಣವಾಗಿ ಬದಲಾದರು. ಅದಕ್ಕೆ ತಕ್ಕಂತೆ ಜನತೆ ಕೂಡ ಬದಲಾದರು. ದೇವರಂತೆ ಕಾಣುತ್ತಿದ್ದ ಜನ ಅವರನ್ನು ದೆವ್ವ ಎಂದರು. ಬಿಜೆಪಿ ಮಂದಿ ವಿಶ್ವಾಸ ದ್ರೋಹಿ ಎಂದು ಕರೆದಾಗ, ಅದನ್ನು ಜನರು ಕೂಡ, ಅಹುದು ಅಹುದೆಂದರು.
ನಂತರ ಅವರ ಅಧಃಪತನ ಹೇಗಾಯಿತು ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಎಲ್ಲಿದ್ದ ಜೆಡಿಎಸ್ ಎಲ್ಲಿಗೆ ಹೋಯಿತು, ಇದಕ್ಕೇನು ಕಾರಣ ಎಂಬುದು ಸ್ವತಃ ಕುಮಾರಸ್ವಾಮಿಯವರಿಗೇ ತಿಳಿದು ಹೋಗಿದೆ. ಆದರೂ ಅವರು ಬದಲಾಗಿಲ್ಲ, ತನ್ನ ಹಿಂದಿನ ನಡೆಯ ಮೂಲಕ ರಾಜಕಾರಣ ಮಾಡುವುದು ಬೇಕೆನಿಸಿಲ್ಲ.
ಇದರಿಂದ ಜೆಡಿಎಸ್‌ಗೆ ಅಥವಾ ಗೌಡರ ಕುಟುಂಬಕ್ಕೆ ಲಾಭವಾಗುತ್ತದೋ, ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ರಾಜ್ಯದ ಜನತೆಯ ಪಾಲಿಗಂತೂ ದೊಡ್ಡ ನಷ್ಟ. ಜನತೆ ಅಂದು ನೋಡಿದ್ದ ಕುಮಾರಸ್ವಾಮಿ ಇಂದು ಕಾಣಿಸುತ್ತಿಲ್ಲ. ಸಭ್ಯ ರಾಜಕಾರಣಿಯೊಬ್ಬರು ಕಳೆದು ಹೋಗಿದ್ದಾರೆ. ಎಲ್ಲರ ನಡುವೆ ಅವರೂ ಒಬ್ಬ ರಾಜಕಾರಣಿಯಾಗಿ, ಗೌಡರ ನಿಜವಾದ ಮಗನಾಗಿ ಕಾಣುತ್ತಾರೆ.
ಕರ್ನಾಟಕದ ಇಂದಿನ ರಾಜಕಾರಣ ಹೀಗೆ ಬೀದಿಯ ಕೊಚ್ಚೆಯಲ್ಲಿ ಬಿದ್ದಿದ್ದರೆ, ಬಿಹಾರವನ್ನು ಮೀರಿಸುವಂತೆ ಆಗಿದ್ದರೆ, ಅದಕ್ಕೆ ಪ್ರಮುಖ ಕಾರಣ ಕುಮಾರಸ್ವಾಮಿ ಎಂದು ಹೇಳದೆ ವಿಧಿಯಿಲ್ಲ.