ರಾಜ್ಯ ರಾಜಕಾರಣ ಅಸಹ್ಯ ಹುಟ್ಟಿಸಿದೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಗುರುವಾರ, 21 ಅಕ್ಟೋಬರ್ 2010( 12:03 IST )
ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ತೀರಾ ಅಸಹ್ಯ ಹುಟ್ಟಿಸಿದ್ದು, ನನ್ನಂಥವರಿಗೆ ಉಸಿರುಗಟ್ಟುವಂತಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬುಧವಾರ ಏರ್ಪಡಿಸಿದ್ದ ಮಹಾತ್ಮಗಾಂಧಿ ನನ್ನ ತಾತ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಸಮಸ್ಯೆ, ಅಭಿವೃದ್ಧಿಗಳಿಗೆ ಸ್ಪಂದಿಸಬೇಕಾಗಿದ್ದ ಶಾಸಕರು ಇಂದು ರೆಸಾರ್ಟ್ಗಳಲ್ಲಿ ಠಿಕಾಣಿ ಹೂಡಿರುವುದು ಕೆಟ್ಟ ಬೆಳವಣಿಗೆ. ಶಾಸನ ರಚಿಸುವ ವಿಧಾನಮಂಡಲಕ್ಕೆ ಇಂದು ಭದ್ರತೆ ನೀಡಬೇಕಾಗಿದ್ದು, ದಿನನಿತ್ಯ ಭಯ ಎನ್ನುವುದು ಹಾಸುಹೊಕ್ಕಾಗಿದೆ ಎಂದು ವಿಷಾದಿಸಿದರು.
ಅಧಿಕಾರದ ಮೋಹದಿಂದ ಆಡಳಿತಾರೂಢ ಸರಕಾರದ ವಿರುದ್ಧವೇ ಸಂಚು ರೂಪಿಸುವುದು, ಪಕ್ಷದಲ್ಲಿ ಇದ್ದುಕೊಂಡೇ ಷಡ್ಯಂತ್ರ ನಡೆಸುವುದು ಅದಕ್ಕೆ ವಿಪಕ್ಷಗಳ ಸಾಥ್ ಇವೆಲ್ಲವೂ ಜನಸಾಮಾನ್ಯರಲ್ಲಿಯೂ ಅಸಮಾಧಾನ ಹುಟ್ಟು ಹಾಕಿದೆ ಎಂದು ಈ ಸಂದರ್ಭದಲ್ಲಿ ವಿಶ್ಲೇಷಿಸಿದರು.