ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ ಕೋಲಾರ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಂ.ನಾರಾಯಣ ಸ್ವಾಮಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ತಂದಿದೆ.
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಂ.ನಾರಾಯಣಸ್ವಾಮಿ ಅವರು ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾರಾಯಣಸ್ವಾಮಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಕಚೇರಿ ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳ ಹಿಂದೆ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಅವರು ರಾಜೀನಾಮೆ ನೀಡಿದ್ದಾರೆಂಬ ಊಹಾಪೋಹ ಕೇಳಿಬಂದಿತ್ತು. ಆದರೆ ಬುಧವಾರ ರಾಮಚಂದ್ರ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಹೇಳುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದರು.
ಇದೀಗ ಕಾಂಗ್ರೆಸ್ ಪಕ್ಷದ ಎಂ.ನಾರಾಯಣಸ್ವಾಮಿ ರಾಜೀನಾಮೆ ಸಲ್ಲಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಆಘಾತ ತಂದೊಡ್ಡಿದೆ. ಒಟ್ಟಾರೆ ರಾಜ್ಯರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಜಂಗೀಕುಸ್ತಿಯಲ್ಲಿ ಕಾಂಗ್ರೆಸ್‌ನ ಇಬ್ಬರು ಹಾಗೂ ಜೆಡಿಎಸ್‌ನ ಚನ್ನಪಟ್ಟಣ ಶಾಸಕ ಎಂ.ಸಿ. ಅಶ್ವತ್ಥ ರಾಜೀನಾಮೆ ನೀಡಿದಂತಾಗಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಆಪರೇಶನ್ ಕಮಲವನ್ನು ಮತ್ತೆ ಮುಂದುವರಿಸಿದೆ ಎಂದು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ವಿಪಕ್ಷಗಳ ಸಂಖ್ಯಾಬಲ ಕುಸಿತ: ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳ ರಾಜಕೀಯ ತಿಕ್ಕಾಟದಲ್ಲಿ ಇದೀಗ ವಿಪಕ್ಷಗಳ ಬಲ ಕುಸಿಯತೊಡಗಿದೆ. ಅ.14ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿ 106 (ಸ್ಪೀಕರ್ ಸೇರಿ 107) ಹಾಗೂ ಕಾಂಗ್ರೆಸ್, ಜೆಡಿಎಸ್ ಸೇರಿ 100 ಸಂಖ್ಯಾಬಲ ಹೊಂದಿದ್ದವು. ಇದೀಗ ಕಾಂಗ್ರೆಸ್ ಪಕ್ಷದ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಬಂಗಾರಪೇಟೆ ಶಾಸಕ ಎಂ.ನಾರಾಯಣಸ್ವಾಮಿ ರಾಜೀನಾಮೆ ನೀಡುವ ಮೂಲಕ 73ರಿಂದ 71ಕ್ಕೆ ಸಂಖ್ಯಾಬಲ ಇಳಿದಿದೆ. (ಈಗಾಗಲೇ ಜೆಡಿಎಸ್‌ನ ಚನ್ನಪಟ್ಟಣ ಶಾಸಕ ಎಂ.ಸಿ.ಅಶ್ವತ್ಥ್ ಕೂಡ ರಾಜೀನಾಮೆ ನೀಡಿದ್ದಾರೆ.)
ಇನ್ನೂ ಕೆಲವು ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಸಾಧ್ಯತೆ?: ಪ್ರತಿಪಕ್ಷಗಳ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಗಾಳ ಹಾಕತೊಡಗಿರುವುದು ಸ್ಪಷ್ಟವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ನ ಇನ್ನೂ ನಾಲ್ಕೈದು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಇದು ನೀಚ ಕೃತ್ಯ-ಆರ್.ವಿ.ದೇಶಪಾಂಡೆ: ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಇದೊಂದು ನೀಚ ಕೃತ್ಯ ಎಂದು ಎಂ.ನಾರಾಯಣಸ್ವಾಮಿ ರಾಜೀನಾಮೆ ಕುರಿತಂತೆ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷದ ನೀಚ ರಾಜಕಾರಣವನ್ನು ನಾಡಿನ ಜನ ಗಮನಿಸಬೇಕು. ಕುದುರೆ ವ್ಯಾಪಾರ ರಾಜಾರೋಷವಾಗಿ ನಡೆಯುತ್ತಿದೆ ಎಂಬುದನ್ನು ರಾಜ್ಯಪಾಲರು, ನ್ಯಾಯಾಲಯಗಳು, ಮಾಧ್ಯಮಗಳು ಹಾಗೂ ರಾಷ್ಟ್ರಪತಿಗಳು ಗಮನಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಲೂಟಿ ಮಾಡಿದ ಹಣ ಮತ್ತು ಅಧಿಕಾರದ ದುರುಪಯೋಗ ಮಾಡಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿಸುವ ನೀಚ ಕೆಲಸಕ್ಕೆ ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು.