ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಹಿಡಿತ ಬಿಗಿ: 15 'ಗಲಾಟೆ' ಎಂಎಲ್ಲೆಗಳಿಗೆ ಶೋಕಾಸ್ (Bangalore | Karnataka | Vidhana Sabhe | Unruly MLAs | Show-Cause Notice)
ಅ.11ರಂದು ವಿಶ್ವಾಸಮತ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಸಾಕ್ಷಾತ್ ರೌಡಿಗಳಿಗೂ ಮಿಗಿಲಾಗಿ ವರ್ತಿಸುತ್ತಾ ಗದ್ದಲವೆಬ್ಬಿಸಿ, ಕರ್ನಾಟಕ ಶಾಸನ ಸಭೆಯ ಮಾನ ಹರಾಜು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಪಕ್ಷದ 15 ಶಾಸಕರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದ್ದು, ಅ.26ರೊಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ, ಬಿಜೆಪಿಯು ಪ್ರತಿಪಕ್ಷಗಳ ಕೊರಳಿನ ಉರುಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ.
ಅಪ್ಪಚ್ಚು ರಂಜನ್ ನೇತೃತ್ವದ ಸದನ ಸಮಿತಿಯು ಈ ಕುರಿತು ವಿಚಾರಣೆಯನ್ನು ಅ.28ರಿಂದ ಆರಂಭಿಸುವಂತೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ನಿರ್ದೇಶಿಸಿದ್ದಾರೆ ಮತ್ತು ಹದಿನೈದು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ವಿಶ್ವಾಸಮತ ಯಾಚನೆ ಕಲಾಪ ಸಂದರ್ಭದಲ್ಲಿ ವಿಧಾನಸೌಧದ ಕಿಟಕಿ ಬಾಗಿಲುಗಳಿಗೆ ಒದೆಯುವುದು, ಸದನದ ರಕ್ಷಣೆಗಿದ್ದ ಮಾರ್ಷಲ್‌ಗಳಿಗೇ ಕಪಾಳ ಮೋಕ್ಷ ಮಾಡುವುದು, ಥಳಿಸುವುದು, ಪೊಲೀಸರ ಮೇಲೆ ಕೈಮಾಡುವುದು, ಗಾಜು ಒಡೆಯುವುದು, ಬೆಂಚು-ಮೇಜುಗಳ ಮೇಲೇರುವುದು, ಅಂಗಿ ಹರಿದುಕೊಂಡು ಕುಣಿದಾಡುವುದು... ಇತ್ಯಾದಿ ಮಹಾನ್ ಕಾರ್ಯಗಳಲ್ಲಿ ತೊಡಗಿದ್ದ ಗೌರವಾನ್ವಿತ ಶಾಸಕರಿಗೆಲ್ಲ ಈ ನೋಟೀಸು ಜಾರಿಗೊಳಿಸಲಾಗಿದೆ.
ಕಾಂಗ್ರೆಸಿನ ಪಿ.ಎಂ. ಅಶೋಕ, ಕೆ.ಪಿ. ಬಚ್ಚೇಗೌಡ (ಮಾರ್ಷಲ್‌ಗೇ ಕಪಾಳ ಮೋಕ್ಷ ಮಾಡಿದವರು), ರಹೀಂಖಾನ್, ಯು.ಟಿ. ಖಾದರ್, ಬಿ.ಕೆ.ಸಂಗಮೇಶ್, ಕಾಕಾಸಾಹೇಬ್ ಪಾಟೀಲ್, ಎಚ್. ಪಿ. ಮಂಜುನಾಥ್, ಸುರೇಶ್ ಗೌಡ ಹಾಗೂ ಜೆಡಿಎಸ್ ಪಕ್ಷದ ಜಮೀರ್ ಅಹ್ಮದ್ ಖಾನ್, ಬಂಡೆಪ್ಪ ಕಾಶೆಂಪೂರ್, ಪುಟ್ಟೇಗೌಡ, ಎಚ್.ಸಿ.ಬಾಲಕೃಷ್ಣ, ಕೆ. ರಾಜು, ಎಂ.ಟಿ. ಕೃಷ್ಣಪ್ಪ ಸೇರಿದ್ದಾರೆ.