ಅನರ್ಹಗೊಂಡ ಬಿಜೆಪಿಯ 11 ಶಾಸಕರ ಪ್ರಕರಣದ ಕುರಿತಂತೆ ಎರಡು ದಿನಗಳ ಕಾಲ ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ.ಸಭಾಹಿತ್ ಅವರು ಗುರುವಾರ ತೀರ್ಪನ್ನು ಕಾಯ್ದಿರಿಸಿದ್ದಾರೆ.
11 ಶಾಸಕರ ಅನರ್ಹ ಪ್ರಕರಣದ ಬಗ್ಗೆ ಬುಧವಾರ ಶಾಸಕರ ಪರ ವಕೀಲರಾದ ಬಿ.ವಿ.ಆಚಾರ್ಯ, ರಾಘವನ್ ಹಾಗೂ ರವಿವರ್ಮಾ ಕುಮಾರ್ ವಾದ ಮಂಡಿಸಿದ್ದರು. ವಾದ ಆಲಿಸಿದ ನಂತರ ನ್ಯಾ.ಸಭಾಹಿತ್ ಅವರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರು. ರಾಜಕೀಯ ದ್ವೇಷಕ್ಕಾಗಿ ಈ ಶಾಸಕರ ಮೇಲೆ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಬುಧವಾರ ಶಾಸಕರ ಪರ ವಕೀಲರು ವಾದ ಮಂಡಿಸಿದ್ದರು.
ಅಲ್ಲದೇ, ಅ.6ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಅತೃಪ್ತ ಶಾಸಕರು ಮನವಿ ಸಲ್ಲಿಸಿದ್ದಾರೆ. ಆದರೆ ಅ5ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪೀಕರ್‌ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮಾಡಿರುವ ಮನವಿ ಗಮನಿಸಿದರೆ ರಾಜಕೀಯ ಸೇಡು ತೀರಿಸಿಕೊಳ್ಳುವ ಅಂಶ ಎದ್ದು ಕಾಣಲಿದೆ ಎಂದು ತಿಳಿಸಿದ್ದರು.
ಪೂರ್ವ ಯೋಜಿತವಾಗಿ ನಿರ್ಧಾರ ಕೈಗೊಂಡು 11 ಶಾಸಕರನ್ನು ರಾಜಕೀಯ ಬಲಿಪಶು ಮಾಡಲಾಗಿದೆ ಎಂದು ರವಿವರ್ಮಾ ಕುಮಾರ್ ವಾದ ಮಂಡಿಸಿದ್ದರು.
ಇಂದು ಸರಕಾರದ ಪರವಾಗಿ ವಾದ ಮಂಡಿಸಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರು, ಬಂಡಾಯದ ಬಾವುಟ ಹಾರಿಸಿ ರಾಜ್ಯಪಾಲರಿಗೆ ಪತ್ರ ನೀಡಿದ 11 ಮಂದಿ ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸಮಂಜಸವಾಗಿದೆ ಎಂದು ತಿಳಿಸಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಬಗ್ಗೆ ಈ 11 ಮಂದಿ ಶಾಸಕರಿಗೆ ಅತೃಪ್ತಿ, ಸಿಟ್ಟು ಇದ್ದಿದ್ದರೆ ಪಕ್ಷದ ವೇದಿಕೆಯಲ್ಲೇ ಚರ್ಚಿಸಬಹುದಾಗಿತ್ತು.
ಆದರೆ ಪಕ್ಷದ ವೇದಿಕೆಯಲ್ಲಿ ಏನನ್ನೂ ಹೇಳದೆ ಸರಕಾರ ಉರುಳಿಸಲು ರಾಜ್ಯಪಾಲರಿಗೆ ಪತ್ರ ನೀಡುವ ಮೂಲಕ ಶಿಸ್ತು ಉಲ್ಲಂಘಿಸಿದ್ದಾರೆ. ಸರಕಾರ ಕೆಡವಲು ಮುಂದಾದ ಶಾಸಕರ ಅನರ್ಹಗೊಳಿಸಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಕ್ರಮ ಸಂವಿಧಾನಬದ್ಧವಾಗಿಯೇ ಇದೆ ಎಂದು ವಾದ ಮಂಡಿಸಿದರು.
ಒಟ್ಟಾರೆ ರಾಜ್ಯರಾಜಕಾರಣದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದ 11 ಶಾಸಕರ ಅನರ್ಹತೆ ಪ್ರಕರಣದ ವಾದ-ಪ್ರತಿವಾದ ಗುರುವಾರ ಮುಕ್ತಾಯಗೊಂಡಿದೆ. ಇದೀಗ ಮೂರನೇ ನ್ಯಾಯಮೂರ್ತಿ ಸಭಾಹಿತ್ ಅವರು ನೀಡುವ ತೀರ್ಪು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.