'ಗುಬ್ಬಿ' ಮೇಲೆ ಕಮಲಾಸ್ತ್ರ; ಎಚ್‌ಡಿಕೆಯಿಂದ ಸಿಡಿ ಬಾಂಬ್ ಸ್ಫೋಟ!
ಬೆಂಗಳೂರು, ಗುರುವಾರ, 21 ಅಕ್ಟೋಬರ್ 2010( 20:30 IST )
ರಾಜ್ಯ ರಾಜಕೀಯದ ತಿಕ್ಕಾಟದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಡುವೆ ವಾಗ್ದಾಳಿ ಬಿರುಸುಗೊಂಡಿರುವ ನಡುವೆಯೇ, ಗುಬ್ಬಿಯ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಬಿಜೆಪಿ ಹಣದ ಹಣದ ಆಮಿಷ ಒಡ್ಡಿರುವ ಸಿಡಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡುವ ಮೂಲಕ ರಾಜಕೀಯ ಕೆಸರೆರಚಾಟ ಮುಂದುವರಿದಂತಾಗಿದೆ.
ಸುರೇಶ್ ಗೌಡ: 15 ಕೋಟಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸ್ತೀವಿ ಸರೀನಾ, ಅಶೋಕ್‌ಗೆ ಫಿಕ್ಸ್ ಮಾಡ್ಲಾ
ಸುರೇಶ್ ಗೌಡ: ಹಾಗಾದ್ರೆ ಡಿಮಾಂಡ್ ಹೇಳಿ ಬ್ರದರ್
ಶ್ರೀನಿವಾಸ್: 25 ಕೋಟಿ ಕೊಟ್ರೆ ನೋಡ್ಬೌದು...
ಸುರೇಶ್ ಗೌಡ: ಹಾಗಾದ್ರೆ ನಾನು ಆರ್.ಅಶೋಕ್ ಹತ್ತಿರ ಮಾತನಾಡಿ ಫೈನಲ್ ಸೆಟ್ಲ್ ಮಾಡಿ ನಿಮಗೆ ಹತ್ತು ನಿಮಿಷದಲ್ಲೇ ಕಾಲ್ ಮಾಡ್ತೇನೆ.
ಶ್ರೀನಿವಾಸ್: ಸರಿ, ಹಾಗೇ ಮಾಡಿ...
ಸಿಡಿ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ತಾವು ಆಪರೇಷನ್ ಕಮಲ ಮಾಡಿಲ್ಲ ಅಂತ ಬಿಜೆಪಿಯವರು ಹೇಳ್ತಾರಲ್ಲ, ಇದಕ್ಕೆ ಏನೆನ್ನುತ್ತಾರೆ ಎಂದು ಪ್ರಶ್ನಿಸಿದರು. ನಾವು ಬಿಡುಗಡೆ ಮಾಡಿರುವುದು ನಕಲಿ ಸಿಡಿ ಅಲ್ಲ, ನಕಲಿ ಸಿಡಿ, ನಕಲಿ ರಾಮನ ಸೃಷ್ಟಿ ಬಿಜೆಪಿ ಕೆಲಸ ಎಂದು ವ್ಯಂಗ್ಯವಾಡಿದರು.
ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲಿಯೇ ಸರಕಾರ ಸುಭದ್ರಗೊಳಿಸುವ ನಿಟ್ಟಿನಲ್ಲಿ ಒಬ್ಬೊಬ್ಬ ಶಾಸಕರಿಗೆ 25, 50 ಕೋಟಿ ಹಣ ಕೊಟ್ಟು ಖರೀದಿಸಲು ನಿಮಗೆ ಹಣ ಎಲ್ಲಿಂದ ಬಂತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರ್.ಅಶೋಕ್ ಅವರನ್ನು ಪ್ರಶ್ನಿಸಿದ್ದಾರೆ. ನೀವು ಯಾರ ಜೊತೆ ಕುದುರೆ ವ್ಯಾಪಾರ ಮಾಡಿದ್ದೀರಿ ಎಂಬ ಬಗ್ಗೆ ದೂರವಾಣಿ ವಿವರವನ್ನು ರಾಜ್ಯದ ಜನತೆಯ ಮುಂದಿಡುತ್ತೀರಾ ಎಂದು ಸವಾಲು ಹಾಕಿದರು.
ವರ್ತೂರು ಪ್ರಕಾಶ್‌ಗೆ ಸರಕಾರಿ ಅಂಬ್ಯುಲೆನ್ಸ್‌ನಲ್ಲಿಯೇ ಅವರ ಮನೆಗೆ ಬಿಜೆಪಿ ಹಣ ರವಾನಿಸಿದೆ ಎಂದು ಗಂಭೀರವಾಗಿ ಆರೋಪಿಸಿದರು. ಅಷ್ಟೇ ಅಲ್ಲ ಇನ್ನೂ 17 ಶಾಸಕರನ್ನು ಹಣದ ಮೂಲಕ ಖರೀದಿಸುವ ಸಂಚನ್ನು ಬಿಜೆಪಿ ರೂಪಿಸಿತ್ತು. ಹಾಗಾಗಿ ಡ್ಯಾಮೇಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಈ ಸಿಡಿಯನ್ನು ಬಿಡುಗಡೆ ಮಾಡಬೇಕಾಯಿತು ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.
ಬಿಜೆಪಿಯ ಕುದುರೆ ವ್ಯಾಪಾರದ ದೂರವಾಣಿ ಸಂಭಾಷಣೆಯ ಸಿಡಿಯನ್ನು ರಾಜ್ಯಾಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ನೀಡುತ್ತೇನೆ. ಅಲ್ಲದೇ ಭ್ರಷ್ಟಾಚಾರದ ಮತ್ತು ಕುದುರೆ ವ್ಯಾಪಾರ ಮಾಡುತ್ತಿರುವ ಬಿಜೆಪಿ ಸರಕಾರವನ್ನು ಕೂಡಲೇ ವಜಾಗೊಳಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ನಕಲಿ ಸಿಡಿ ಬಿಡುಗಡೆ ಮಾಡಲು ನಾಚಿಕೆಯಾಗ್ಬೇಕು... ಪ್ರಧಾನ ಮಂತ್ರಿ ಕುಟುಂಬದಿಂದ ಬಂದವರು, ಮುಖ್ಯಮಂತ್ರಿಯಾಗಿದ್ದವರು, ಇಂತಹಾ ನಕಲಿ ಸಿಡಿಗಳನ್ನು ತಯಾರಿಸಿ ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಇವರಿಗೆ ನಾಚಿಕೆಯಾಗ್ಬೇಕು ಎಂದು ಪ್ರತಿಕ್ರಿಯಿಸಿದವರು ಈ 'ಗುಬ್ಬಿ' ಮೇಲೆ ಕಮಲಾಸ್ತ್ರ ಹೂಡಿದ್ದಾರೆ ಎಂಬ ಆರೋಪ ಹೊತ್ತ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ.
ನಾನು ಟಿ-ಶರ್ಟ್ ಹಾಕೋದು ಮನೆಯಲ್ಲಿ ಅಥವಾ ನನ್ನ ಕ್ಷೇತ್ರದಲ್ಲಿ ಎಲ್ಲಾದರೂ ಮಲಗುವಾಗ ಮಾತ್ರ. ಎರಡು ಮೂರು ವರ್ಷಗಳ ಹಿಂದೆ ಯಾವತ್ತೋ, ಟೀ ಕುಡಿಯುತ್ತಿದ್ದಾಗ ಮಾತನಾಡುತ್ತಿದ್ದ ದೃಶ್ಯಗಳನ್ನು ತೋರಿಸುತ್ತಿದ್ದಾರೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದ ಬಳಿಕ ಸುವರ್ಣ ವಾಹಿನಿಯ ಸ್ಟುಡಿಯೋದಲ್ಲಿ ಕಾಣಿಸಿಕೊಂಡ ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಅವರು ಯಾವುದೇ ಒಕ್ಕಲಿಗರನ್ನು ಮೇಲೆ ಬರಲು ಬಿಡುತ್ತಿಲ್ಲ. ಬಚ್ಚೇಗೌಡ, ಭೈರೇಗೌಡ ಮುಂತಾದವರನ್ನು ಯಾರನ್ನೂ ಇವರು ಮೇಲೆ ಬರಲು ಬಿಡಲಿಲ್ಲ ಎಂದೂ ಸುರೇಶ್ ಗೌಡ ಆರೋಪಿಸಿದರು.
ಕುಮಾರಸ್ವಾಮಿ ಒಳ್ಳೆಯ ಚಿತ್ರ ನಿರ್ಮಾಪಕರು. ಒಳ್ಳೆಯ ಚಿತ್ರ ನಿರ್ಮಿಸಿ ರಾಜ್ಯದ ಜನತೆಗೆ ಸಿಡಿ ತೋರಿಸುತ್ತಿದ್ದಾರೆ ಎಂದ ಅವರು, ಮನೆಗೆ ಹೋಗಿ ಮಾತುಕತೆ ನಡೆಸಿದ್ದೆ ಎಂದಾಗಿದ್ದರೆ, ಎಲ್ಲ ಸಿದ್ಧ ಮಾಡಿಕೊಂಡೇ ಮಾತಾಡಿದ್ದೆ. ನಾಲ್ಕು ಕಡೆ ಕ್ಯಾಮರಾ ಅಳವಡಿಸಿದ್ದೆ, ನನ್ನಲ್ಲಿ ಒಂದು ಪೆನ್ ಕ್ಯಾಮರಾನೂ ಇಟ್ಕೊಂಡಿದ್ದೆ ಎಂದೆಲ್ಲಾ ಹೇಳಿದ್ರಲ್ಲಾ... ಆ ಮಾತುಕತೆಗಳನ್ನು ಸರಿಯಾಗಿ ಯಾಕೆ ರೆಕಾರ್ಡ್ ಮಾಡಿಲ್ಲ. ಬರೇ ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯವನ್ನೇಕೆ ತೋರಿಸಿದ್ದು. ಅಷ್ಟು ಸಲ ಹೋಗಿದ್ದಿದ್ದರೆ, ನಾನೇ ಖುದ್ದಾಗಿ ಇದ್ದ ದೃಶ್ಯಗಳನ್ನೇಕೆ ತೋರಿಸಿಲ್ಲ? ಆಡಿಯೋ ಮಾತ್ರ ಯಾಕೆ ಕೇಳಿಸಿದ್ದಾರೆ. ನಾನೇನೂ ಮಾತನಾಡಿಲ್ಲ. ಅದು ತನಿಖೆಯಾಗಲಿ ಬೇಕಿದ್ದರೆ. ಯಾವುದೇ ತನಿಖೆಗೆ ಸಿದ್ಧ ಎಂದರು.