ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದನ್ನೂ ಮೀರಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಅವೆಲ್ಲವೂ ರಾಜ್ಯದ ಜನತೆಗೆ ಹೇವರಿಕೆ ಹುಟ್ಟಿಸುವಷ್ಟು, ಛೀ.. ಥೂ.. ಎಂದು ಉಗಿದು ಬಿಡುವಷ್ಟು ಕೊಳಕು. ಆದರೂ ರಾಜಕೀಯ ಪಕ್ಷಗಳು ನಾ ಮುಂದು, ತಾ ಮುಂದು ಎಂದು ಸತ್ಯ ಹರಿಶ್ಚಂದ್ರನನ್ನು ಗುತ್ತಿಗೆ ಪಡೆದುಕೊಂಡಿರುವಂತೆ ಬೆನ್ನು ತಟ್ಟಿ ಕೊಳ್ಳುತ್ತಿವೆ, ಸ್ವಕುಚ ಮರ್ದನ ಮಾಡಿಕೊಳ್ಳುತ್ತಿವೆ.
ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿಯವರು ಸಿ.ಡಿ.ಯೊಂದನ್ನು ಬಿಡುಗಡೆ ಮಾಡಿದ್ದಾರೆ. ನಮ್ಮ ರಾಜ್ಯ ಬಿಹಾರವಾಗಿ ಹೋಗಿದೆ ಎಂದು ಇದನ್ನು ನೋಡಿದರೆ ಸಾಕು. ತೊಗಲಿನ ವ್ಯಾಪಾರಕ್ಕಿಂತಲೂ ಕೀಳಾದ, ಮಾನವಂತರು, ಮರ್ಯಾದಸ್ಥರು ಕಿವಿ-ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾದ ವಿಚಾರವಿದು.
ಒಬ್ಬ ಖರೀದಿ ಮಾಡುವವನು, ಇನ್ನೊಬ್ಬ ಮಾರಾಟಕ್ಕೆ ಇರುವವನು. ನಮ್ಮ ರಾಜಕಾರಣಿಗಳು ಹಾಡು ಹಗಲೇ ಹೇಗೆ ಪ್ರಜಾಪ್ರಭುತ್ವದ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಚಿತ್ರಣವಿದು. ಇದರೊಂದಿಗೆ ಬಿಜೆಪಿಯ ಇದ್ದ-ಬದ್ದ ಮಾನವೂ ಹೊರಟು ಹೋಗಿದೆ. ತಾನೇ ತೋಡಿದ ಗುಂಡಿಗೆ ಕೇಸರಿ ಪಕ್ಷ ಅನಾಮತ್ತಾಗಿ ಬಿದ್ದಿದೆ.
ತನ್ನದೇ ಆದ ಅನೈತಿಕ ರಾಜಕೀಯ ತಂತ್ರ 'ಆಪರೇಷನ್ ಕಮಲ'ಕ್ಕೆ ಜೆಡಿಎಸ್ ಶಾಸಕನನ್ನು ಬೀಳಿಸಲು ಹೋಗಿ ಬಿಜೆಪಿ ತಾನೇ ಮುಗ್ಗರಿಸಿದೆ. ಇತರ ಪಕ್ಷಗಳಿಗಿಂತ ತಾನು ಭಿನ್ನ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರ ಹೂರಣ ಜಗದ ಮುಂದೆ ಬಟಾ ಬಯಲಾಗಿದೆ.
ಅಲ್ಲಿ ಮಸುಕು ಮಸುಕಾದ ಚಿತ್ರಗಳಲ್ಲ, ಅಥವಾ ಅಸ್ಪಷ್ಟ ಧ್ವನಿಗಳೂ ಅಲ್ಲ. ಎಲ್ಲವೂ ಸ್ಪಷ್ಟವಾಗಿದೆ. ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಬಿಜೆಪಿ ಶಾಸಕರ ಸುರೇಶ್ ಗೌಡರು ಪಕ್ಷಾಂತರಕ್ಕೆ ಡೀಲಿಂಗ್ ಮಾಡಿದ್ದಾರೆ. ಸರಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಅಡ್ಡದಾರಿಯನ್ನು ಹಿಡಿದಿರುವುದು ಈ ಮೂಲಕ ಮತ್ತಷ್ಟು ಸ್ಪಷ್ಟವಾಗಿದೆ.
ಪ್ರತಿಪಕ್ಷಗಳು 'ಅಬಾರ್ಷನ್ ಕಮಲ'ದ ಕುತಂತ್ರ ಮಾಡಿದಾಗ ವೀರನಂತೆ ಎದೆಯೊಡ್ಡಿ ಹುತಾತ್ಮನಾಗುವುದನ್ನು ಬಿಟ್ಟು ಅಧಿಕಾರ ಲಾಲಸೆಯಿಂದ ಶಕುನಿಯ ತಂತ್ರವನ್ನು ಅನುಸರಿಸಿ ಬಿಜೆಪಿ ಎಲ್ಲವನ್ನೂ ಕಳೆದುಕೊಂಡಿದೆ. ಇನ್ನೇನಿದೆ ಆ ಪಕ್ಷದಲ್ಲಿ ಸಮರ್ಥಿಸಿಕೊಳ್ಳಲು?
ಬಿಜೆಪಿ ಮಾನ ಕಳೆದುಕೊಂಡಿದೆ -- ಇದು ನಿಜ. ಆದರೆ ಎಚ್.ಡಿ. ದೇವೇಗೌಡರ ಸಾರಥ್ಯದ ಜಾತ್ಯತೀತ ಜನತಾದಳ ಇದನ್ನು ಉಳಿಸಿಕೊಂಡಿದೆಯೇ? ಗಾಂಧಿ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ನಲ್ಲಿ ಇದೆಯೇ ಎಂಬ ಪ್ರಶ್ನೆ ಉದ್ಭವವಾದರೆ, ಇದೆ ಎಂದು ಹೇಳಲಾದೀತೆ?
ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕೀಯದ ವಿದ್ಯಮಾನಗಳನ್ನು ನೋಡಿದವರಿಗೆ ಈ ಬಗ್ಗೆ ಯಾವುದೇ ಸಂಶಯಗಳಿರುವುದಿಲ್ಲ. ಬಿಜೆಪಿ ಮತ್ತು ಸರಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಸಚಿವ-ಶಾಸಕರನ್ನು ಬಂಡೇಳುವಂತೆ ಮಾಡಿದ್ದು ಯಾರು ಮತ್ತು ಯಾಕಾಗಿ ಎಂಬ ಪ್ರಶ್ನೆಗಳನ್ನು ಮುಂದಿಟ್ಟಾಗ 'ಇದು ಧರ್ಮ ಯುದ್ಧ' ಎಂಬ ರೆಡಿಮೇಡ್ ಉತ್ತರ ಬರುತ್ತದೆಯಾದರೂ, ಅಲ್ಲೂ ಕಾಂಚಾಣ ಕೆಲಸ ಮಾಡಿರುವುದು ಹೌದಲ್ಲವೇ?
ಎಲ್ಲರೂ ಮಾಡುತ್ತಿರುವುದು ಕುತಂತ್ರ ರಾಜಕಾರಣ. ಸರಕಾರವೇ ಪಾಲ್ಗೊಂಡಿದ್ದ ಹಗರಣವೊಂದನ್ನು ಹೊರಗೆಳೆಯುವುದನ್ನು ಬಿಟ್ಟು ಕುಮಾರಸ್ವಾಮಿಯವರು ಶಕುನಿ ತಂತ್ರವನ್ನು ಅನುಸರಿಸಿದ್ದರು. ಇದು ಒಂದು ಹಂತದವರೆಗೆ ಯಶಸ್ವಿಯಾದ ನಂತರ, ತನಗೆ ಮುಳುವಾಗುತ್ತಿದೆ ಎಂದು ಅನುಭವವಾಗುತ್ತಿದ್ದಂತೆ ಮತ್ತೊಂದು ನಾಟಕಕ್ಕೆ ಹೊರಳಿದ್ದಾರೆ. ಅದುವೇ ಸಿ.ಡಿ. ಪ್ರಹಸನ.
ಮೇಲ್ನೋಟಕ್ಕೆ ಇದು ಬಿಜೆಪಿಯ ಮಾನ ಹರಾಜಾಗಿರುವುದನ್ನು ತೋರಿಸುತ್ತದೆ. ಆದರೆ ನಮಗೆ ಕಂಡಿರುವುದು ಬಿಜೆಪಿಯದ್ದು ಮಾತ್ರ. ಜೆಡಿಎಸ್ ಮತ್ತು ಕಾಂಗ್ರೆಸ್‌ಗಳು ಡೀಲಿಂಗ್ ಮಾಡಿದ್ದನ್ನು ಯಾರು ಕೂಡ ವೀಡಿಯೋ ಚಿತ್ರೀಕರಣ ಮಾಡಲು ಹೋಗಿಲ್ಲ. ಅಷ್ಟಕ್ಕೂ ಇದು ರಾಜಕಾರಣಿಗಳಿಗೆ ಹೊಸತಲ್ಲ. ಅವೆಲ್ಲವೂ ಬಹಿರಂಗವಾದರೆ ನಮ್ಮ ಪ್ರಜಾತಂತ್ರ ವ್ಯವಸ್ಥೆಯೇ ಕುಸಿದು ಹೋಗಬಹುದೇನೋ?
ಇದೇ ಕುಮಾರಸ್ವಾಮಿಯವರು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಫೋನ್ ಮಾಡಿ ಆಮಿಷ ಒಡ್ಡಿದ್ದನ್ನು ನೋಡಿಲ್ಲವೇ? ಗೋವಾ, ಚೆನ್ನೈ ಮುಂತಾದ ಕಡೆ ಹೋಗಿದ್ದು ಬಿಜೆಪಿ ಶಾಸಕರ ಜತೆ ಟೀ ಕುಡಿಯಲು ಎನ್ನುವುದನ್ನು ರಾಜ್ಯದ ಜನತೆ ನಂಬಬೇಕೆಂದು ಬಯಸುವುದು ಅದೆಂತಹಾ ಮೂರ್ಖತನ. ಇದೇ ಕಾಂಗ್ರೆಸ್ ನೆರೆ ಸಂತ್ರಸ್ತರ ಹಣವನ್ನು ಗುಳುಂ ಮಾಡಿದ್ದನ್ನು ರಾಜ್ಯದ ಜನ ಮರೆತಿದ್ದಾರೆಯೇ?
ಇಲ್ಲ, ನಿಜವಾದ ರಾಜಕಾರಣವೆಂದರೆ ಇದೇ. ಆ ರಾಜಕಾರಣ ಪ್ರಜೆಗಳಿಗೆ ತಿಳಿದು ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಶಾಸಕರಿಗೆ 25-50 ಕೋಟಿ ರೂಪಾಯಿಗಳನ್ನು ಬಿಜೆಪಿ ಕೊಡಬೇಕಾದರೆ, ಅದನ್ನು ಸಂಪಾದಿಸುವ ಮಾರ್ಗ ಕೂಡ ನ್ಯಾಯವಾಗಿರಲು ಸಾಧ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್‌ಗಳು ಆಡಳಿತ ಪಕ್ಷ-ಪಕ್ಷೇತರ ಶಾಸಕರಿಗೆ ಕೋಟಿಗಟ್ಟಲೆ ಆಮಿಷ ಒಡ್ಡುವುದಾದರೆ, ಮುಂದಿನ ದಿನಗಳಲ್ಲಿ ಅದನ್ನು ವಸೂಲಿ ಮಾಡುವ ಅನಿವಾರ್ಯತೆ ಅವುಗಳಿಗಿರುತ್ತದೆ.
ಸದ್ಯಕ್ಕಂತೂ ಈ ಸರಕಾರ ತೊಲಗದೆ ಬೇರೆ ದಾರಿಗಳು ಕಾಣುತ್ತಿಲ್ಲ. ರಾಜ್ಯಪಾಲರು ವಜಾ ಮಾಡುತ್ತಾರೋ, ನ್ಯಾಯಾಲಯದ ತೀರ್ಪಿನಿಂದ ಬುಡಮೇಲಾಗುತ್ತದೋ ಅಥವಾ ಕುಮಾರಣ್ಣನ ಕುತಂತ್ರಕ್ಕೆ ಉರುಳುತ್ತದೋ -- ಒಟ್ಟಾರೆ ಜನತೆಗೆ ರಾಜ್ಯ ರಾಜಕಾರಣ ರೇಜಿಗೆ ಹುಟ್ಟಿಸಿದೆ. ಒಂದಿಷ್ಟು ಕಾಲ ರಾಷ್ಟ್ರಪತಿ ಆಳ್ವಿಕೆಯನ್ನೇ ರಾಜ್ಯ ಕಾಣುವುದು ಒಳಿತು ಎನಿಸುತ್ತಿದೆ.
ಜತೆಗೆ ಬ್ರಿಟೀಷರೂ ನೆನಪಿಗೆ ಬರುತ್ತಿದ್ದಾರೆ. ಅವರು ಇಷ್ಟವಾಗುತ್ತಿದ್ದಾರೆ.