ತಾಯಿ ಆಣೆ...ಸರಕಾರದ ವಿರುದ್ಧ ಪಿತೂರಿ ನಡೆಸಿಲ್ಲ:ರೇಣುಕಾಚಾರ್ಯ
ಬೆಂಗಳೂರು, ಶುಕ್ರವಾರ, 22 ಅಕ್ಟೋಬರ್ 2010( 11:22 IST )
'ನಾನು ಬಿಜೆಪಿಯ ನಿಷ್ಠಾವಂತ ಶಾಸಕ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಹೆತ್ತ ತಾಯಿ ಆಣೆಗೂ ಪಿತೂರಿ ನಡೆಸಿಲ್ಲ' ಎಂದು ತಿಳಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಮತ್ತು ಪಕ್ಷೇತರ ಶಾಸಕರನ್ನು ಒಟ್ಟುಗೂಡಿಸಿ ಮುಖ್ಯಮಂತ್ರಿ ವಿರುದ್ಧವೇ ಬಂಡಾಯದ ಕಹಳೆ ಮೊಳಗಿಸಿ ರೆಸಾರ್ಟ್‌ಗಳಲ್ಲಿ ಠಿಕಾಣಿ ಹೂಡಿ ಸರಕಾರವನ್ನು ಅಸ್ಥಿರಗೊಳಿಸಲು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಮುಖ ಪಾತ್ರ ವಹಿಸಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಅತೃಪ್ತರ ಜೊತೆಯೇ ತಲೆದೋರಿದ ಭಿನ್ನಭಿಪ್ರಾಯದಲ್ಲಿ ದಿಢೀರನೆ ಉಲ್ಟಾ ಹೊಡೆದು ಮುಖ್ಯಮಂತ್ರಿಗೆ ಬೆಂಬಲ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗಾಗಲಿ ಅಥವಾ ಮುಖ್ಯಮಂತ್ರಿಯವರಿಗೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೇ ರಾಜ್ಯ ಸರಕಾರವನ್ನು ಉರುಳಿಸಲು ಸಂಚು ನಡೆಸಿದ್ದವು ಎಂದು ದೂರಿದರು.
ಅತೃಪ್ತ ಶಾಸಕರ ಜೊತೆ ಗೋವಾ ರೆಸಾರ್ಟ್‌ನಲ್ಲಿ ಉಳಿದಿದ್ದಾಗ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ಪತ್ರಕ್ಕೆ ಬಲವಂತವಾಗಿ ಸಹಿ ಹಾಕಿದ್ದರು ಎಂದು ಆರೋಪಿಸಿದರು. ಅನಾವಶ್ಯಕವಾಗಿ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಾನು ಯಾವತ್ತೂ ಬಿಜೆಪಿ ವಿರುದ್ಧ ಪಿತೂರಿ ನಡೆಸಿಲ್ಲ ಎಂದು ತಮ್ಮ ಮಾತಿನುದ್ದಕ್ಕೂ ಸಮಜಾಯಿಷಿ ನೀಡಿದರು.