ಕಿತ್ತೂರು ಉತ್ಸವದ ಅಂಗವಾಗಿ ಬೀದಿಗಳಲ್ಲಿ ಹಾಕಿದ್ದ ಕನ್ನಡ ಕಟೌಟ್, ಬ್ಯಾನರ್, ಬಾವುಟಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಕುಂದಾ ನಗರದ ಕಡೋಲಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾ ನಗರಿಯಲ್ಲಿ ಅಕ್ಟೋಬರ್ 23, 24 ಹಾಗೂ 25ರಂದು ಕಿತ್ತೂರು ಉತ್ಸವಕ್ಕಾಗಿ ಜಿಲ್ಲಾಡಳಿತ ಭರದ ಸಿದ್ದತೆ ನಡೆಸುತ್ತಿದ್ದು, ಇದರ ಅಂಗವಾಗಿ ಕನ್ನಡ ಪರ ಸಂಘಟನೆಗಳು ಕಡೋಲಿ ಗ್ರಾಮದ ಬೀದಿಯಲ್ಲಿ ಕಟೌಟ್, ಬ್ಯಾನರ್ ಕಟ್ಟಿದ್ದವು. ಆದರೆ ದುಷ್ಕರ್ಮಿಗಳು ಶುಕ್ರವಾರ ನಸುಕಿನ ವೇಳೆ ಬೆಂಕಿ ಹಚ್ಚಿರುವುದು ಕಂಡುಬಂದಿತ್ತು.
ಕನ್ನಡ ಬಾವುಟಗಳಿಗೆ ಬೆಂಕಿ ಹಚ್ಚಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಪರ ಸಂಘಟನೆ, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಘಟನೆ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಪೊಲೀಸ್ ಭದ್ರತೆಯನ್ನೂ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಬಾವುಟಗಳಿಗೆ ಬೆಂಕಿ ಹಚ್ಚಿರುವ ಘಟನೆ ಕುರಿತು ದೂರು ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.