'ವಾಲ್ಮೀಕಿ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಅತೃಪ್ತ ಶಾಸಕರ ಬಂಡಾಯದ ವಿರುದ್ಧ ಮಾತನಾಡುತ್ತ ಅನರ್ಹಗೊಂಡ ಶಾಸಕ ನರೇಂದ್ರ ಸ್ವಾಮಿ ದಲಿತರಲ್ಲ ಬಲಿತರು ಎಂದು ಕೊಂಕು ನುಡಿದಾಗ ಜನರೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು!
ನರೇಂದ್ರ ಸ್ವಾಮಿ ಅವರು ಶಾಸಕರಾಗಿ ಬಂಡಾಯದ ಕಹಳೆ ಮೊಳಗಿಸಿ ಬಿಜೆಪಿ ಪಕ್ಷವನ್ನು ತೇಜೋವಧೆ ಮಾಡಿದ್ದು ತಪ್ಪು ಎಂದು ಆರೋಪ ಹೊರಿಸಿ ಮಾತನಾಡುತ್ತಿದ್ದಂತೆಯೇ ಸಮಾರಂಭದಲ್ಲಿ ನೆರೆದಿದ್ದ ಜನರು, ನಿಲ್ಲಿಸಿ ನಿಮ್ಮ ಭಾಷಣ ನೀವು ಕೂಡ ಭಿನ್ನಮತೀಯ ಶಾಸಕರ ಜೊತೆ ಹೋಗಿ ನಾಟಕ ಆಡಿದ್ದು ರಾಜ್ಯದ ಜನತೆ ಗೊತ್ತು. ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿ ಅದನ್ನು ಬಿಟ್ಟು ರಾಜಕೀಯ ಮಾತನಾಡಿದರೆ ಹುಷಾರ್ ಎಂದು ತರಾಟೆಗೆ ತೆಗೆದುಕೊಂಡರು.
ಆದರೂ ಮಾತು ಮುಂದುವರಿಸಲು ಶಾಸಕ ಹರೀಶ್ ಮುಂದಾಗುತ್ತಿದ್ದಂತೆಯೇ, ಕೆಲವರು ವೇದಿಕೆಯತ್ತ ನುಗ್ಗಿ ಹರೀಶ್ ಅವರನ್ನು ಸ್ಟೇಜ್‌ನಿಂದ ಕೆಳಗಿಳಿಸಿ ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ನಿಮ್ಮ ರಾಜಕೀಯದ ಮಾತು ಬೇಡ ಎಂದು ತಾಕೀತು ಮಾಡಿದರು. ಅಷ್ಟರಲ್ಲಿ ಕಾರ್ಯಕ್ರಮದ ಸಂಘಟಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ನರೇಂದ್ರ ಸ್ವಾಮಿ ವಿರುದ್ಧ ಮಾತನಾಡಿ ಹೀರೋ ಆಗಬಹುದು ಎಂದುಕೊಂಡಿದ್ದ ಹರೀಶ್‌ಗೆ ಸಾರ್ವಜನಿಕರಿಂದಲೇ ವಿರೋಧ ವ್ಯಕ್ತವಾದಾಗ, ರಾಜಕೀಯ ಮಾತು ಬಿಟ್ಟು ಕೂಡಲೇ ವಾಲ್ಮೀಕಿ ಕುರಿತು ಪುಟ್ಟ ಭಾಷಣ ಬಿಗಿದು ತೆಪ್ಪಗೆ ಕುಳಿತರು.!