ಚನ್ನರಾಯಪಟ್ಟಣ, ಶುಕ್ರವಾರ, 22 ಅಕ್ಟೋಬರ್ 2010( 15:40 IST )
ಭ್ರಷ್ಟ ರಾಜಕೀಯದ ವಿರುದ್ಧ ಶ್ರೀರಾಮಸೇನೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನವನ್ನು ಜ.12ರಿಂದ ನಡೆಸಲಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ 'ಹಿಂದು ಮಿಷನ್' ಅಡಿಯಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲಿದ್ದು ಇದರ ರೂಪುರೇಷೆಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ ಎಂದು ತಿಳಿಸಿದರು.
ರಾಜ್ಯದ ರಾಜಕೀಯ ಡೊಂಬರಾಟದಿಂದ ಬೇಸತ್ತ ಸಾರ್ವಜನಿಕರು ಇಂತಹ ಲಜ್ಜೆಗೆಟ್ಟವರನ್ನು ಬೀದಿಯಲ್ಲಿ ಬಡಿಯುವ ಕಾಲ ಬರಲಿದೆ. ಕುರ್ಚಿಗಾಗಿ ಬಿಜೆಪಿಯವರು ಸಲ್ಲದ ಪ್ರವೃತ್ತಿಗೆ ಕೈಹಾಕುವುದನ್ನು ಬಿಟ್ಟು ವಿಧಾನಸಭೆ ವಿಸರ್ಜಿಸಿ ನೇರವಾಗಿ ಜನರೆದುರು ಹೋಗಲಿ ಎಂದ ಅವರು, ಇಂತಹ ವ್ಯವಸ್ಥೆಯ ವಿರುದ್ಧ ಯುವಕರು ಸಿಡಿದೇಳಬೇಕು ಎಂದರು.
ದತ್ತ ಪೀಠದ ಹೋರಾಟ 12 ವರ್ಷದಿಂದ ನಡೆಯುತ್ತಿದ್ದರೂ, ಬಿದ್ದುಹೋದ ಗುಹೆಯ ಭಾಗವನ್ನು ದುರಸ್ತಿ ಪಡಿಸಲು ಎರಡೂವರೆ ವರ್ಷದಿಂದ ಬಿಜೆಪಿ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು ವ್ಯಂಗ್ಯವಾಡಿದ ಮುತಾಲಿಕ್, ಇದಕ್ಕಾಗಿ ಜಿಲ್ಲಾಧಿಕಾರಿ ಬಳಿ ಹಣ ಮೀಸಲಿದ್ದರೂ ಕಾಮಗಾರಿ ಏಕೆ ಮಾಡಿಲ್ಲ. ರಾಜಕೀಯ ಪೀಠ ಉಳಿಸಿಕೊಳ್ಳಲು ಕಾತರರಾಗಿ ಇರುವವರಿಗೆ ದತ್ತಪೀಠ ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.