ಭುವನಹಳ್ಳಿಯಲ್ಲಿ ಶೀಘ್ರದಲ್ಲೇ 5 ಕೋಟಿ ರೂ. ವೆಚ್ಚದಲ್ಲಿ ಕುಡಿವ ನೀರಿಗಾಗಿ ಕೆರೆ ನಿರ್ಮಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ತಾಲೂಕಿನ ಭುವನಹಳ್ಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭುವನಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳ ಕುಡಿವ ನೀರಿನ ಬವಣೆ ತಪ್ಪಿಸಲು ಕೆರೆ ನಿರ್ಮಿಸಲಾಗುವುದು. ತುಂಗಭದ್ರಾ ಜಲಾಶಯದಿಂದ ಬರುವ ಜಿಂದಾಲ್ ಪೈಪ್‌ಲೈನ್ ಮೂಲಕ ಈ ಹಳ್ಳಿಗಳ ಜನರು ನೀರು ಪಡೆಯುತ್ತಿದ್ದಾರೆ. ಶುದ್ದೀಕರಿಸದ ನೀರು ಬರುತ್ತಿರುವುದರಿಂದ ಅದನ್ನು ತಪ್ಪಿಸಲು ಕೆರೆ ಕಟ್ಟಿಸಲಾಗುವುದು ಎಂದರು.
ಭುವನಹಳ್ಳಿ ಗ್ರಾಮದ 600 ಜನರಿಂದ ರಕ್ತದ ಸ್ಯಾಂಪಲ್ ಪಡೆಯಲಾಗಿದೆ. ಮಲೇರಿಯ ಹತೋಟಿಗೆ ಬರುತ್ತಿದ್ದು, 53 ಜನರು ಕೊಪ್ಪಳ, ಗಂಗಾವತಿ, ಬಳ್ಳಾರಿ, ಹೊಸಪೇಟೆ ಮತ್ತು ಭುವನಹಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಔಷಧಗಳನ್ನು ವಿತರಿಸಲಾಗುತ್ತಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇದುವರೆಗೆ ಭುವನಹಳ್ಳಿಯಲ್ಲಿ 9 ಮಂದಿ ಹಾಗೂ ಗಾದಿಗನೂರಿನಲ್ಲಿ ಮತ್ತು ಧರ್ಮಸಾಗರದಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯರ ವರದಿ ಪ್ರಕಾರ ಇಬ್ಬರು ಮಾತ್ರ ಮಲೇರಿಯದಿಂದ ಮೃತಪಟ್ಟಿದ್ದಾರೆ. ಉಳಿದವರು ಕ್ಷಯ ಮತ್ತು ಕಾಮಾಲೆಯಿಂದ ನಿಧನರಾಗಿದ್ದಾರೆ. ಮಲೇರಿಯ ಹತೋಟಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.