ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕರ್'ನಾಟಕ': ಬಿಜೆಪಿ ಈ ಪರಿ ಕೆಟ್ಟುಹೋಯಿತೇಕೆ? (Karnataka | BJP | Operation Kamala | Congress | JDS | Yaddyurappa)
Bookmark and Share Feedback Print
 
ಸಿಂಹಾವಲೋಕನ

ವಿಧಾನಸಭೆಗೆ ಪದೇ ಪದೇ ಚುನಾವಣೆಗಳಾಗುತ್ತಿರುವ ವಿಶಿಷ್ಟ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗುತ್ತಿದೆ. 2008ರ ಮೇ ತಿಂಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಕ್ಷವೇ ಪ್ರಧಾನವಾಗಿ ಈ ಮರುಚುನಾವಣೆಗಳ ಹೊರೆ ಹೊರಬೇಕಾಗುತ್ತಿದೆ. ಕಾರಣ - ಆಪರೇಶನ್ ಕಮಲ.

ಬಿಜೆಪಿಯು ಅಧಿಕಾರಕ್ಕೆ ಬಂದಂದಿನಿಂದ ಕಾಂಗ್ರೆಸ್ ಮತ್ತು ಬಿಜೆಪಿಯ 10 ಮಂದಿ ಶಾಸಕರು ತಮ್ಮ ಸ್ಥಾನ ತೊರೆದು ಮರುಚುನಾವಣೆಯ ಅನಿವಾರ್ಯತೆ ಸೃಷ್ಟಿಸಿದ್ದಾರೆ. ಅದರಲ್ಲಿ 7 ಸ್ಥಾನಗಳಿಗೆ ಚುನಾವಣೆಯೂ ನಡೆದಿದೆ. ಏಳು ಕಾಂಗ್ರೆಸ್-ಜೆಡಿಎಸ್ ಶಾಸಕರು ಮರುಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿ ಒಬ್ಬ ನಾಮನಿರ್ದೇಶಿತ ಸದಸ್ಯನೂ ಸೇರಿದಂತೆ 225 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ 117ರ ಸಂಖ್ಯಾಬಲ ಒದಗಿಸಿಕೊಟ್ಟಿದ್ದರು.

25ರಿಂದ 50 ಕೋಟಿವರೆಗೆ ಭಾರೀ ಹಣದ ವಹಿವಾಟು ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಆಪರೇಶನ್ ಕಮಲದ ಶಂಕೆಯೊಂದಿಗೆ, ಈಗಾಗಲೇ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಜಿಡಿಎಸ್‌ನ ಒಬ್ಬ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆ ಮೂರು ಸ್ಥಾನಗಳಿಗೂ ಮರು ಚುನಾವಣೆಯಾಗಬೇಕಿದೆ. ಮೇ 2008ರಲ್ಲಿ ಬಿಜೆಪಿ 110 ಶಾಸಕರು ಜಯ ಗಳಿಸಿದ್ದು, ಸ್ವತಂತ್ರ ಶಾಸಕರ ಬಲದೊಂದಿಗೆ ಸರಕಾರ ರಚಿಸಲಾಗಿತ್ತು. ಸ್ವತಂತ್ರರ ಅವಲಂಬನೆ ಕುಗ್ಗಿಸುವ ನೆಪದಲ್ಲಿ ಆರಂಭವಾಗಿದ್ದ ಆಪರೇಶನ್ ಕಮಲ, ಇಂದು ಪ್ರತಿಪಕ್ಷಗಳ ಪಾಳಯದಲ್ಲಿ ನಡುಕ ಹುಟ್ಟಿಸಿದ್ದು ನಿಜವೇ ಆದರೂ, ಬಿಜೆಪಿಗೇ ಮುಳುವಾಗುತ್ತಿರುವುದು ಕೂಡ ಸುಳ್ಳೇನಲ್ಲ.

ಸ್ವಂತ ಬಲದ ಬಹುಮತ ದೊರಕಿಸಿಕೊಳ್ಳುವ ಬಿಜೆಪಿಯ ಪ್ರಯತ್ನವು, ಅದಕ್ಕೇ ಭಾರವಾಗಿ, ಒಂದು ಕಾಲದಲ್ಲಿ ಅತ್ಯುತ್ತಮ ರಾಜ್ಯ ಎಂಬ ಹೆಸರು ಪಡೆದಿದ್ದ ಕರ್ನಾಟಕವಿಂದು ಅಸ್ಥಿರತೆಯಲ್ಲಿ ತೊಳಲಾಡುತ್ತಾ, ಪದೇ ಪದೇ ಚುನಾವಣೆಗಳನ್ನು ಎದುರಿಸುವ ಹಂತ ತಲುಪಿದೆ. ಅದರೊಂದಿಗೆ ಶಾಸಕರ ವರ್ತನೆ ಬಗೆಗೆ, ರಾಜ್ಯದ ಘನತೆ ಬಗೆಗೆ ಕಳಂಕವೂ ತಟ್ಟಿಕೊಂಡಿದೆ.

ಕಳೆದ ಆರು ವರ್ಷಗಳಲ್ಲಂತೂ ಕನ್ನಡಿಗರು ಅರಾಜಕತೆಯ ಪರಿಸ್ಥಿತಿಯಲ್ಲಿ ತೊಳಲಾಡುತ್ತಿರುವುದು ಸುಳ್ಳಲ್ಲ. ಅಲ್ಲಿ ಎರಡು ಅಪ್ರಾಪ್ತ ಸರಕಾರಗಳು (2004-2006 ನಡುವೆ ಕಾಂಗ್ರೆಸ್ - ಜೆಡಿಎಸ್ ಸರಕಾರ ಮತ್ತು 2006-2008 ನಡುವೆ ಬಿಜೆಪಿ-ಜೆಡಿಎಸ್ ಸರಕಾರ) ಕುಸಿದು 2008ರಲ್ಲಿ ಅವಧಿಗೆ ಒಂದು ವರ್ಷ ಮುನ್ನವೇ ಚುನಾವಣೆಯಾದರೂ, ಪೂರ್ಣ ಬಹುಮತ ಯಾರಿಗೂ ದೊರೆಯದೆ ಮತ್ತೆ ಅಸ್ಥಿರತೆ ಕಾಡಿತು.

ಆಪರೇಶನ್ ಕಮಲದಲ್ಲಿ ಹೊರಗಿನಿಂದ ಬಂದವರಿಗೆ ಮಂತ್ರಿಗಿರಿ, ನಿಗಮ-ಮಂಡಳಿ ಅಧ್ಯಕ್ಷತೆ ಮುಂತಾದ ಆಮಿಷಗಳನ್ನೆಲ್ಲಾ ತೋರಿಸಿ, ಮೊನ್ನೆ ಮೊನ್ನೆ ಬಂದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದಾಗ ಒಳಗಿನವರ ಮನಸ್ಸುಗಳು ಕುದಿಯಲಾರಂಭಿಸಿದವು. ಪರಿಣಾಮ ಆಂತರಿಕ ಭಿನ್ನಮತ ಸ್ಫೋಟ. ಒಳಗಿದ್ದವರು, ನಿಷ್ಠಾವಂತರು ಹತಾಶರಾದರು, ನಿರಾಶರಾದರು, ಆಕ್ರೋಶಗೊಂಡರು.

ಸೆಪ್ಟೆಂಬರ್ 22ರಂದು ನಡೆಸಿದ ಸಂಪುಟ ಪುನಾರಚನೆಯು ಬಿಜೆಪಿಯ ನಿಷ್ಠಾವಂತ ಶಾಸಕರ ಆಕಾಂಕ್ಷೆಯ, ಆಕ್ರೋಶದ ಬೆಂಕಿಗೆ ತುಪ್ಪ ಸುರಿಯಿತು. ಮೂವರು ಬಿಜೆಪಿ ಮಂತ್ರಿಗಳನ್ನು, ಒಬ್ಬ ಪಕ್ಷೇತರ ಸಚಿವರನ್ನು ವಜಾಗೊಳಿಸಿ, ಆರು ಮಂದಿಯನ್ನು ಸೇರಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಎರಡನೇ ಬರಿ ಶಾಸಕರು ಭಾರೀ ಪ್ರಮಾಣದಲ್ಲಿ ಬಂಡೆದ್ದರು. ಇದಾದ ಎರಡು ವಾರಗಳಲ್ಲಿ 11 ಬಿಜೆಪಿ ಶಾಸಕರು (ಇವರಲ್ಲಿ ಕೆಲವರು ಬೇರೆ ಪಕ್ಷದಿಂದ ಬಂದವರು) ಮತ್ತು ಐವರು ಪಕ್ಷೇತರರು ಬಂಡೆದ್ದು ಚೆನ್ನೈ-ಕೊಚ್ಚಿ-ಮುಂಬೈ-ಗೋವಾಗಳಿಗೆ ಓಡಿ ಹೋಗುವ ಮೂಲಕ ಸರಕಾರವನ್ನು ಅಲ್ಪಮತಕ್ಕೆ ಇಳಿಸಿದರು. ಇದರಿಂದಾಗಿ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸಬೇಕಾದ ಪ್ರಸಂಗ ಬಂತು.

ಪಕ್ಷಾಂತರ ನಿಷೇಧ ಕಾಯಿದೆಯ 16 ಮಂದಿಯ ಶಾಸಕತ್ವವನ್ನೂ ಕಿತ್ತುಕೊಂಡು ಬಿಜೆಪಿಯು, ಆ ದಿನ ಕರ್ನಾಟಕವೇ ನಾಚಿಕೆಯಿಂದ ತಲೆ ತಗ್ಗಿಸುವ ರೀತಿಯಲ್ಲಿ ನಡೆದ ಶಾಸಕರ ದಾಂಧಲೆಭರಿತ ಕಲಾಪದಲ್ಲಿ ವಿಶ್ವಾಸಮತ ಸಾಬೀತುಪಡಿಸಿಯೂ ಬಿಟ್ಟಿತು. ಶಾಸಕರ ಅನರ್ಹತೆ ವಿಚಾರ ಹೈಕೋರ್ಟ್ ಮೆಟ್ಟಿಲೇರಿದರೆ, ರಾಜ್ಯಪಾಲರು, ಅ.11ರ ಕಲಾಪ ಸರಿಯಾಗಿಲ್ಲ, ಪುನಃ ವಿಶ್ವಾಸಮತ ಸಾಬೀತುಪಡಿಸಿ ಎಂದಾಗ, ಅ.14ರಂದು ಎರಡನೇ ಬಾರಿಯೂ ವಿಶ್ವಾಸಮತ ಸಾಬೀತುಪಡಿಸಿದರು. ಅಂದಿನ ಸಂಖ್ಯಾಬಲ 106-100 ಅಂತರದ ಗೆಲುವು.

ಆದರೆ ಈಗ ಯಡಿಯೂರಪ್ಪ ಮತ್ತು ಬಿಜೆಪಿ ಸರಕಾರಕ್ಕೆ ಕರ್ನಾಟಕದ ಹೋದ ಮಾನವನ್ನು ಮರಳಿ ತರುವುದು, ಪಕ್ಷವನ್ನು ಪುನಃ ಸರಿಪಡಿಸುವುದು ಮತ್ತು ಅದರ ನಡು ನಡುವೆ ಅವಕಾಶ ದೊರೆತರೆ ರಾಜ್ಯದ ಅಭಿವೃದ್ಧಿ ಮಾಡುವ ಬಗ್ಗೆಯೂ ಮನಸ್ಸು ಮಾಡುವ ಅತೀ ದೊಡ್ಡ ಜವಾಬ್ದಾರಿಯಿದೆ.
ಸಂಬಂಧಿತ ಮಾಹಿತಿ ಹುಡುಕಿ