ಅಯೋಧ್ಯೆಯ ವಿವಾದಿತ ಸ್ಥಳವು ಸಂಪೂರ್ಣವಾಗಿ ಹಿಂದೂಗಳಿಗೇ ಸೇರಬೇಕು. ಅದು ರಾಮ ಜನ್ಮಭೂಮಿಯಾಗಿರುವುದರಿಂದ ವಿಭಜನೆ ಸಾಧ್ಯವಿಲ್ಲ. ಈ ಬಗ್ಗೆ ಮುಸ್ಲಿಮರು ಉದಾರ ಮನಸ್ಸಿನಿಂದ ಹಿಂದೂಗಳಿಗೆ ಸಹಕರಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಒತ್ತಾಯಿಸಿದ್ದಾರೆ.
NRB
ಅಯೋಧ್ಯೆಯಿಂದ ಮರಳಿದ ನಂತರ ಪೇಜಾವರ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಂತರ ಸಭೆಯಲ್ಲೂ ಇದೇ ನಿರ್ಧಾರಕ್ಕೆ ಬರಲಾಗಿದೆ. ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಮಾಡಲು ನಿರ್ಧರಿಸಲಾಗಿದೆ. ಅದಕ್ಕೂ ಮೊದಲು ಇಡೀ ಜಾಗವನ್ನು ಹಿಂದೂಗಳಿಗೆ ನೀಡಬೇಕು ಎನ್ನುವುದು ನನ್ನ ವೈಯಕ್ತಿಕ ನಿಲುವು ಎಂದರು.
ಇಲ್ಲಿ ಕೇಂದ್ರ ಸರಕಾರವು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ ಪೇಜಾವರ ಶ್ರೀಗಳು, ಮುಸ್ಲಿಮರ ಜತೆ ಚರ್ಚೆ ನಡೆಸಿ ಬೇರೆ ಕಡೆ ಮಸೀದಿ ನಿರ್ಮಿಸಲು ಒಪ್ಪಿಸಬೇಕು ಎಂದರು.
ಯಾವುದೇ ಕಾರಣಕ್ಕೂ ಶ್ರೀರಾಮ ಜನ್ಮಭೂಮಿಯನ್ನು ಪರಭಾರೆ ಮಾಡಲು ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿದ ಅವರು, ಇಡೀ ಅಯೋಧ್ಯೆಯ ವಿವಾದಿತ ಸ್ಥಳವು ಶ್ರೀರಾಮ ಜನ್ಮಭೂಮಿಗೆ ಮೀಸಲು. ಈ ವಿಚಾರದಲ್ಲಿ ಯಾವುದೇ ರಾಜಿ ಅಸಾಧ್ಯ. ಆದರೂ ಸೌಹಾರ್ದಯುತ ಪರಿಹಾರಕ್ಕೆ ನಮ್ಮ ಒಲವು ಇದೆ ಎಂದು ಸ್ಪಷ್ಟಪಡಿಸಿದರು.
ಮೂವರು ನ್ಯಾಯಾಧೀಶರೂ ಅದು ರಾಮ ಜನ್ಮಭೂಮಿ ಮತ್ತು ಅಲ್ಲಿ ಮೊದಲು ಮಂದಿರ ಇತ್ತು ಎನ್ನುವುದನ್ನು ಒಪ್ಪಿಕೊಂಡಿರುವುದರಿಂದ ಸಂದೇಹಗಳು ಉಳಿದಿಲ್ಲ. ವಿವಾದಿತ ಸ್ಥಳದಲ್ಲಿ ಮಸೀದಿ ಕಟ್ಟಲು ಅವಕಾಶವೇ ಇಲ್ಲದಿರುವುದರಿಂದ ಮುಸ್ಲಿಮರು ಉದಾರ ದೃಷ್ಟಿಯಿಂದ ಇದನ್ನು ಬಿಟ್ಟುಕೊಡಬೇಕು. ಅಲ್ಲಿರುವ 67 ಎಕರೆ ಭೂಮಿಯನ್ನೂ ರಾಮ ಜನ್ಮಭೂಮಿಗೇ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಹಾಕಿದಾಗ, ಶ್ರೀಗಳು ಮರು ಪ್ರಶ್ನೆಯನ್ನು ಹಾಕಿ ಗಮನ ಸೆಳೆದರು.
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮಂದಿರ-ಮಸೀದಿಯ ಬದಲು ಸ್ಮಾರಕ ನಿರ್ಮಿಸಬಹುದಲ್ಲವೇ ಎಂದಿದ್ದಕ್ಕೆ, ಈ ಪ್ರಶ್ನೆ ಮೆಕ್ಕಾ ಮತ್ತು ಜೆರೂಸಲೇಂಗೆ ಅನ್ವಯವಾಗುತ್ತದೆಯೇ ಎಂದರು.
ಹೈಕೋರ್ಟ್ ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟಿನಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ಏನು ಮಾಡುತ್ತೀರಿ ಎಂದಾಗ, ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದು ಎಂದು ನಂಬಿದವರು ನಾವು; ಅದು ತಪ್ಪು, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದರೆ ನಾವು ಒಪ್ಪಲು ಸಿದ್ಧರಿಲ್ಲ ಎಂದರು.