ನೂರು ಶಾಸಕರನ್ನು ಖರೀದಿ ಮಾಡಿದರೂ ಬಿಜೆಪಿ ಸರಕಾರ ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಾಳುವುದಿಲ್ಲ ಇಲ್ಲ, ಬದುಕುವುದು ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಕುದುರೆ ವ್ಯಾಪಾರದ ವಿರುದ್ಧ ಕಾಂಗ್ರೆಸ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಆತ್ಮವಿಶ್ವಾಸವನ್ನು ಅಡಗಿಸಬೇಕೆಂಬ ದುರುದ್ದೇಶದಿಂದ ಎಷ್ಟೇ ಶಾಸಕರ ಖರೀದಿ ಮಾಡಿದರೂ ಸರಕಾರ ಉಳಿಯುವುದಿಲ್ಲ ಎಂದರು.
ಇದರಿಂದ ಕಾರ್ಯಕರ್ತರು ವಿಚಲಿತರಾಗಿ ಕೊರಗುವುದು ಬೇಡ. ಏನೇ ಆಗಲಿ ಸರಕಾರ ಉಳಿಯುವುದಿಲ್ಲ. ಆದ್ದರಿಂದ ಕಾರ್ಯಕರ್ತರು, ಮುಖಂಡರು ಈಗಿನ ಬೆಳವಣಿಗೆಗಳಿಂದ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಪಕ್ಷಾಂತರಿಗಳಿಗೆ ಜನರೇ ಬುದ್ಧ ಕಲಿಸುತ್ತಾರೆ. ಆ ದಿನಗಳು ದೂರವಿಲ್ಲ ಎಂದು ಹೇಳಿದರು.
ಯಾವ ಪಕ್ಷದಿಂದ ಗೆದ್ದು ಹಣ, ಅಧಿಕಾರದ ಆಮಿಷಕ್ಕೆ ಬಲಿಯಾಗಿ ತಾವು ಏರಿ ಬಂದ ಏಣಿಯನ್ನೇ ಒದ್ದಿರುವ ಶಾಸಕರಿಗೆ ಬಹಿಷ್ಕಾರ ಹಾಕಿ ಅದೇ ರೀತಿ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಬಹಿಷ್ಕರಿಸಿ ಪ್ರತಿಭಟನೆ ಮಾಡುವಂತೆ ಕರೆ ನೀಡಿದರು. ಹಣದ ಥೈಲಿಯಿಂದ ಬಿಜೆಪಿ ತಾತ್ಕಾಲಿಕವಾಗಿ ಬೀಗಬಹುದು. ಆದರೆ, ಮಾಡಿದ್ದುಣ್ಣೋ ಮಹರಾಯ ಎಂಬಂತೆ ತನ್ನ ತಪ್ಪುಗಳೇ ಬಿಜೆಪಿಗೆ ತಿರುಗುಬಾಣವಾಗಿ ಈ ಸರಕಾರ ಪತನವಾಗಲಿದೆ ಎಂದರು.