ಆಡಳಿತಾರೂಢ ಬಿಜೆಪಿ ಸರಕಾರದ ತತ್ವ, ಸಿದ್ದಾಂತ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇತರ ಪಕ್ಷಗಳಿಂದ ಶಾಸಕರು ಬಿಜೆಪಿಗೆ ಸೇರುವ ಮೂಲಕ ತಾವು ನಿಜವಾದ ಗಂಡಸರು ಎಂದು ತೋರ್ಪಡಿಸುತ್ತಿದ್ದರೆ, ಕುಮಾರಸ್ವಾಮಿ ಹೆಂಗಸಿನಂತೆ ವರ್ತಿಸುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಲೇವಡಿ ಮಾಡಿ ಆಪರೇಶನ್ ಕಮಲವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ರೂಪಿಸಿದ್ದ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭ್ರಮನಿರಸನವಾಗಿದೆ. ಹಾಗಾಗಿ ಅವರು ಮತಿಭ್ರಮಣೆಗೆ ಒಳಗಾದವರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪ್ಪ-ಮಕ್ಕಳೇ ಕರ್ನಾಟಕ ಎಂದು ತಿಳಿದುಕೊಂಡಿದ್ದವರಿಗೆ ಬಿಜೆಪಿ ಸರಕಾರದ ಜನಪರ ಕಾರ್ಯ ಸಹಿಸಲು ಆಗುತ್ತಿಲ್ಲ. ಆ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ಸರಕಾರವನ್ನು ಉರುಳಿಸಲು ದಿನಂಪ್ರತಿ ಸಂಚು ರೂಪಿಸತ್ತಲೇ ಇದ್ದಾರೆ ಎಂದು ಆರೋಪಿಸಿದರು.
ಅಧಿಕಾರ ಇಲ್ಲದೆ ಒದ್ದಾಡುತ್ತಿಡುತ್ತಿರುವ ಜೆಡಿಎಸ್ ಮುಖಂಡರು ಏನೇ ಕಸರತ್ತು ಮಾಡಿದರೂ ಬಿಜೆಪಿ ಸರಕಾರ ಉರುಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ ಅಪ್ಪಚ್ಚು ರಂಜನ್, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.