ಹಣದ ಆಮಿಷವೊಡ್ಡಿ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರನ್ನು ಸೆಳೆಯಲು ತುಮಕೂರು ಶಾಸಕ ಸುರೇಶ್ ಗೌಡ ಪ್ರಯತ್ನಿಸಿರುವ ಸಿ.ಡಿ. ಬಿಡುಗಡೆ ರಂಪಾಟದ ನಡುವೆಯೇ ಮಧುಗಿರಿ ಉಪ ಚುನಾವಣೆ ಸಂದರ್ಭದಲ್ಲಿ ತನ್ನ ಸೋಲಿಗೆ ಸುರೇಶ್ ಗೌಡರೇ ಕಾರಣ ಎಂದು ಬಿಜೆಪಿ ಮುಖಂಡ ಚನ್ನಿಗಪ್ಪ ಗಂಭೀರವಾಗಿ ಆರೋಪಿಸಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ.
ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿರುವುದು ವಿಪಕ್ಷಗಳ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರನ್ನು ಬಿಜೆಪಿಗೆ ಸೆಳೆಯಲು ಶಾಸಕ ಸುರೇಶ್ ಗೌಡ ಅವರು ದೂರವಾಣಿ ಮುಖೇನ ನಡೆಸಿರುವ ಸಂಭಾಷಣೆಯ ಸಿ.ಡಿ. ದೃಶ್ಯವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಹಿರಂಗಗೊಳಿಸಿರುವುದು ರಾಜ್ಯರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಟ್ಟಿದೆ.
ಏತನ್ಮಧ್ಯೆಯೇ, ಮಧುಗಿರಿ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ನನ್ನ ಸೋಲಿಗೆ ಸುರೇಶ್ ಗೌಡರೇ ಕಾರಣ ಎಂದು ಬಿಜೆಪಿ ಮುಖಂಡ ಚನ್ನಿಗಪ್ಪ ಆರೋಪಿಸಿರುವುದು ಬಿಜೆಪಿಯನ್ನು ಮತ್ತೊಂದು ಇಕ್ಕಟ್ಟಿಗೆ ಸಿಲುಕಿಸಿದೆ. ಚುನಾವಣೆ ಸಂದರ್ಭದಲ್ಲಿ ಪಾರ್ಟಿ ವತಿಯಿಂದ 1.25 ಕೋಟಿ ರೂಪಾಯಿ ನೀಡಲಾಗಿದ್ದು, ಅಷ್ಟು ಹಣವನ್ನು ಸುರೇಶ್ ಗೌಡ ಗುಳುಂ ಮಾಡಿರುವುದಾಗಿ ಅವರು ಗಂಭೀರವಾಗಿ ದೂರಿದ್ದಾರೆ.
ಸುರೇಶ್ ಗೌಡರಿಂದ ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ. ಹಾಗಾಗಿ ಶಾಸಕರ ಖರೀದಿಯಲ್ಲಿ ತೊಡಗಿರುವ ಸುರೇಶ್ ಗೌಡರನ್ನು ಪಕ್ಷದಿಂದ ಉಚ್ಚಾಟಿಸಿ, ಕ್ರಮ ಕೈಗೊಳ್ಳಬೇಕೆಂದು ಚನ್ನಿಗಪ್ಪ ಒತ್ತಾಯಿಸಿದ್ದಾರೆ.
ಜಿದ್ದಾಜಿದ್ದಿ ಹೋರಾಟದ ಅಖಾಡವಾಗಿದ್ದ ಮಧುಗಿರಿ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಮುನಿಸಿಕೊಂಡು ಬಿಜೆಪಿ ಸೇರಿದ್ದ ಚನ್ನಿಗಪ್ಪ ಅವರನ್ನೇ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಸಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ಚನ್ನಿಗಪ್ಪ ವಿರುದ್ಧ ಜಯಗಳಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.