ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಉಪ ಪ್ರಾಂಶುಪಾಲರೊಬ್ಬರಿಗೆ ಆಕ್ರೋಶಗೊಂಡ ಪೋಷಕರು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಶನಿವಾರ ನಡೆದಿದೆ.
ನಗರದ ಓ ಫಾರಂ ಬಳಿಯ ಹೋಲಿಕ್ರಾಸ್ ಶಾಲೆಯ ಉಪ ಪ್ರಾಂಶುಪಾಲ ಪಿಲಿಪ್ಸ್ ಅವರು ಹತ್ತನೇ ತರಗತಿಯಲ್ಲಿ ಪಾಠ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ತೋಳು ಹಿಡಿಯುವುದು, ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಪೋಷರಲ್ಲಿ ದೂರಿಕೊಂಡಿದ್ದರು.
ಕಾಮುಕ ಶಿಕ್ಷಕನ ಬಗ್ಗೆ ವಿಷಯ ತಿಳಿದ ಪೋಷಕರು ನೇರ ಶಾಲೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪಿಲಿಪ್ಸ್ ಅವರನ್ನು ವಿಚಾರಿಸಿದಾಗ, ವಿದ್ಯಾರ್ಥಿನಿಯರು ಸುಳ್ಳು ಹೇಳುತ್ತಿದ್ದಾರೆ. ನಾನು ಅಸಭ್ಯವಾಗಿ ವರ್ತಿಸಿಯೇ ಇಲ್ಲ ಎಂದು ಸಮಜಾಯಿಷಿ ನೀಡಿದ್ದರು. ಇದರಿಂದ ಆಕ್ರೋಶಿತರಾದ ಪೋಷಕರು ಪಿಲಿಪ್ಸ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಕೂಡ ಸಾಥ್ ನೀಡಿ ಕಾಮುಕ ಶಿಕ್ಷಕನಿಗೆ ಗೂಸಾ ನೀಡಿದರು.
ಇತ್ತೀಚೆಗಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಹೆಚ್ಚುತ್ತಿರುವ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಹೋಲಿಕ್ರಾಸ್ ಶಾಲೆಯ ಉಪ ಪ್ರಾಂಶುಪಾಲ ಪಿಲಿಪ್ಸ್ ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಶಾಲಾ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.