ಶಾಸಕರ ಖರೀದಿ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ, ಸಂಸದ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿ.ಡಿ ಅಸಲಿಯೋ-ನಕಲಿಯೋ ಮೊದಲು ಪತ್ತೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಡಿಯಲ್ಲಿ ಮುದ್ರಿತವಾಗಿರುವುದು ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಧ್ವನಿ ಹೌದೋ ಅಲ್ಲವೋ ಎಂದು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಇದೇ ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಆಮಿಷ ಒಡ್ಡಿದ್ದರು. ನಲವತ್ತು ವರ್ಷ ಪ್ರತಿಪಕ್ಷದಲ್ಲಿದ್ದರೂ ಯಾವುದೇ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸಲಿಲ್ಲ. ಬೇರೆ ಪಕ್ಷದ ಶಾಸಕರು ನಮ್ಮ ಪಕ್ಷದ ತತ್ವ-ಸಿದ್ದಾಂತಗಳನ್ನು ಮೆಚ್ಚಿ ನಮ್ಮಲ್ಲಿಗೆ ಬರುತ್ತಿದ್ದಾರೆ. ಬೇರೆ ಪಕ್ಷದ ಶಾಸಕರು ರಾಜೀನಾಮೆ ಸಲ್ಲಿಸಿದರೆ ಸ್ಪೀಕರ್ ಸ್ವೀಕರಿಸಲೇಬೇಕು. ಇದರಲ್ಲಿ ಸ್ಪೀಕರ್ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.