ಬಿಜೆಪಿ ಪಕ್ಷಕ್ಕೆ ಬರುವವರನ್ನು ಬೇಡ ಎನ್ನಲಾಗದು. ಅದಕ್ಕಾಗಿಯೇ, ಬಂದವರನ್ನು ಸೇರಿಸಿಕೊಳ್ಳುತ್ತೇವೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
15 ದಿನಗಳಿಂದ ಜಲಾವೃತವಾಗಿರುವ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಕ್ಷದ ತತ್ವ, ಸಿದ್ದಾಂತ ಮೆಚ್ಚಿಕೊಂಡು ಕೆಲವರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಅಂಥ ಶಾಸಕರನ್ನು ಕರೆದುಕೊಳ್ಳುತ್ತಿದ್ದೇವೆ. ಆದರೆ, ನಾವಾಗಿಯೇ ಯಾವುದೇ ಶಾಸಕರನ್ನು ಸೆಳೆಯುತ್ತಿಲ್ಲ. ಜತೆಗೆ, ಶಾಸಕರ ಕತ್ತೆ ವ್ಯಾಪಾರಕ್ಕೂ ಕೈ ಹಾಕಿಲ್ಲ. ತಾವಾಗಿಯೇ ಪಕ್ಷಕ್ಕೆ ಬರುತ್ತಿರುವವರನ್ನು ಸ್ವಾಗತಿಸುತ್ತಿದ್ದೇವೆ. ಕಾಂಗ್ರೆಸ್ ಮುಖಂಡರ ವರ್ತನೆಗೆ ಬೇಸತ್ತು ಆ ಪಕ್ಷದ ಇನ್ನೂ ಕೆಲ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.