ನನ್ನನ್ನು ಮುಟ್ಟಲು ಬಂದ್ರೆ ಹುಷಾರ್...!:ಯಡಿಯೂರಪ್ಪ ಎಚ್ಚರಿಕೆ
ಬೈಂದೂರು, ಭಾನುವಾರ, 24 ಅಕ್ಟೋಬರ್ 2010( 09:35 IST )
NRB
'ನನ್ನನ್ನು ಮುಟ್ಟಲು ಬಂದರೆ ಪರಿಣಾಮ ನೆಟ್ಟಗಿರಲ್ಲ'...! ಹೀಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 120 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾತನಾಡಿದ ಅವರು ವಿರೋಧ ಪಕ್ಷಗಳ ಮುಖಂಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಶೀರ್ವಾದದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ನನ್ನನ್ನು ಮುಟ್ಟಿದರೆ ರಾಜ್ಯದ ಆರೂವರೆ ಕೋಟಿ ಜನರ ಆಕ್ರೋಶಕ್ಕೆ ಗುರಿಯಾಗಬೇಕಾದೀತು ಎಂದು ಗುಡುಗಿದ್ದಾರೆ.
ಯಡಿಯೂರಪ್ಪ ಮುಂದಿನ ಎರಡೂವರೆ ವರ್ಷ ಕಾಲ ಅಧಿಕಾರದಲ್ಲಿಯೇ ಉಳಿದರೆ ತಾವು ಮುಂದಿನ ಹತ್ತು ವರ್ಷ ವಿರೋಧ ಪಕ್ಷದಲ್ಲಿಯೇ ಶಾಶ್ವತವಾಗಿ ಇರಬೇಕಾಗುತ್ತದೆ ಎನ್ನುವ ಭಯದಲ್ಲಿ ವಿಪಕ್ಷಗಳ ಹೀಗೆ ಆಡಳಿತಾರೂಢ ಸರಕಾರವನ್ನು ಸಂಚು ನಡೆಸುತ್ತಲೇ ಇವೆ ಎಂದು ಆರೋಪಿಸಿದರು.
ಒಂದು ಬಾರಿ ವಿಶ್ವಾಸದ್ರೋಹ (ಕುಮಾರಸ್ವಾಮಿ) ಮಾಡಿದವರಿಗೆ ರಾಜ್ಯದ ಜನತೆ ಈಗಾಗಲೇ ಪಾಠ ಕಲಿಸಿದ್ದಾರೆ. ಇದೀಗ ಮತ್ತು ಅದೇ ತಪ್ಪು ಮಾಡಿ ನೀವಾಗಿಯೇ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.