ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕೈ' ಬಿಡಲು ನಿರ್ಧಾರ;ಮಾಲೀಕಯ್ಯ ಗುತ್ತೇದಾರ್ - ಮೂವರು ಜೆಡಿಎಸ್‌ಗೆ? (Congress | BJP | Malikayya gutthedhar | Kumaraswamy | Siddaramaih)
'ಕೈ' ಬಿಡಲು ನಿರ್ಧಾರ;ಮಾಲೀಕಯ್ಯ ಗುತ್ತೇದಾರ್ - ಮೂವರು ಜೆಡಿಎಸ್‌ಗೆ?
ಗುಲ್ಬರ್ಗಾ, ಭಾನುವಾರ, 24 ಅಕ್ಟೋಬರ್ 2010( 12:02 IST )
ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಂಗಾರಪೇಟೆಯ ನಾರಾಯಣ ಸ್ವಾಮಿ, ಜಗಳೂರು ಕ್ಷೇತ್ರದ ರಾಮಚಂದ್ರ ಹಾಗೂ ಗುಲ್ಬರ್ಗಾ ಅಫಜಲಪುರ ಕ್ಷೇತ್ರದ ಹಾಲಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಜೆಡಿಎಸ್ ಪಾಳಯಕ್ಕೆ ಸೇರುತ್ತಾರೆಂಬ ವದಂತಿ ದಟ್ಟವಾಗಿ ಕೇಳಿಬರುತ್ತಿದೆ. ಅಲ್ಲದೇ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವುದಿಲ್ಲ ಎಂದು ಗುತ್ತೇದಾರ್ ಬಹಿರಂಗವಾಗಿಯೇ ಹೇಳುವ ಮೂಲಕ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು ಬೀದಿಗೆ ಬಿದ್ದಂತಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿರುವ ನಾರಾಯಣ ಸ್ವಾಮಿ, ರಾಮಚಂದ್ರ ಅವರು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆನ್ನಲಾಗಿದೆ. ಅದೇ ರೀತಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಹೊರಹಾಕಿರುವ ಶಾಸಕ ಮಾಲೀಕಯ್ಯ ಗುತ್ತೇದಾರ್ ಕೂಡ ಕಾಂಗ್ರೆಸ್‌ಗೆ ಶೀಘ್ರದಲ್ಲೇ ಗುಡ್ ಬೈ ಹೇಳಿ ಜೆಡಿಎಸ್ ಪಾಳಯಕ್ಕೆ ನೆಗೆಯುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
ಮೂವರು ಕಾಂಗ್ರೆಸ್ ಮುಖಂಡರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಆದರೆ ಈ ಬಗ್ಗೆ ಜೆಡಿಎಸ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜೆಡಿಎಸ್ ಗ್ರೀನ್ ಸಿಗ್ನಲ್ ಬಳಿಕ ಮೂವರು ಅಧಿಕೃತವಾಗಿ ಸೇರುವ ಸಾಧ್ಯತೆ ಇದೆ ಎಂಬ ಊಹಾಪೋಪ ಹರಿದಾಡುತ್ತಿದೆ.
ಸಿದ್ದು ಜೊತೆ ಮಾತನಾಡಿ ಕಾಂಗ್ರೆಸ್‌ಗೆ ಗುಡ್‌ಬೈ-ಮಾಲೀಕಯ್ಯ: 'ನಾನು ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಶಾಸಕನಾಗಿದ್ದೇನೆ. ಆದರೆ ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಈ ಬಗ್ಗೆ ಸೋಮವಾರ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಕಾಂಗ್ರೆಸ್‌ಗೆ ವಿದಾಯ ಹೇಳುತ್ತೇನೆ' ಎಂದು ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಟಿವಿ9 ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಯೂ ಸರಿಯಾಗಿ ಆಗುತ್ತಿಲ್ಲ. ನೇಮಕಾತಿ ವಿಚಾರದಲ್ಲಿಯೂ ಕಡೆಗಣಿಸಲಾಗಿದೆ. ಒಟ್ಟಿನಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿ ಇರಲು ಸಾಧ್ಯವಿಲ್ಲ ಎಂದ ಅವರು, ತಾನು ಕಾಂಗ್ರೆಸ್ ಪಕ್ಷದಲ್ಲಿ ಇರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲಾ ಅಸಮಾಧಾನಗಳ ಬಗ್ಗೆ ಸಿದ್ದರಾಮಯ್ಯನವರ ಜೊತೆ ಚರ್ಚಿಸುವೆ, ಅಲ್ಲದೆ, ಹೈಕಮಾಂಡ್ ನಮಗೆ ನ್ಯಾಯ ಕೊಡುತ್ತೇವೆ ಎಂದು ಭರವಸೆ ನೀಡಿದರೆ ಆಗ ಕಾಂಗ್ರೆಸ್‌ನಲ್ಲಿ ಇರುವುದಾಗಿ ಹೇಳಿದರು. ಒಟ್ಟಿನಲ್ಲಿ ನಮಗೆ ನ್ಯಾಯ ಸಿಗಬೇಕು ಎಂದರು.
ಬಿಜೆಪಿಗೆ ಹೋಗುತ್ತೇನೆ ಅಂತ ಹೇಳಿಲ್ಲ: ಪಕ್ಷದಲ್ಲಿ ಇರುವುದಿಲ್ಲ ಎನ್ನುತ್ತೀರಿ, ಹಾಗಾದರೆ ಬಿಜೆಪಿಗೆ ಸೇರುತ್ತೀರಾ ಎಂಬ ಪ್ರಶ್ನೆಗೆ, ಅವೆಲ್ಲ ಮಾಧ್ಯಮಗಳ ಸೃಷ್ಟಿ. ನಾನು ಬಿಜೆಪಿ ಸೇರುತ್ತೇನೆ ಅಂತ ಎಲ್ಲಿಯೂ ಹೇಳಿಲ್ಲ. ರಾಜ್ಯದಲ್ಲಿನ ಇತ್ತೀಚೆಗಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಮರ್ಪಕವಾಗಿ ಸ್ಪಂದಿಸಿಲ್ಲ. ಇದರಿಂದ ರಾಜ್ಯದ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗಿದೆ. ಹಾಗಾಗಿ ನಾನು ಪಕ್ಷ ತೊರೆಯುವ ನಿರ್ಧಾರ ಬಂದಿರುವೆ. ಯಾವ ಪಕ್ಷ ಎಂಬುದು ನಂತರ ತಿಳಿಯುತ್ತದೆ ಎಂದು ಗುತ್ತೇದಾರ್ ಸಮಜಾಯಿಷಿ ನೀಡಿದರು.