ಗೋವಾ ರೆಸಾರ್ಟ್‌ನಲ್ಲಿ ರಾಜ್ಯಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಶಾಸಕರು ನಡೆಸಿದ ಪ್ರಯತ್ನಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅಮಾಸೆಬೈಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಕಾನೂನು ತಜ್ಞರ ಜತೆ ಈ ಬಗ್ಗೆ ಸಮಾಲೋಚನೆ ನಡೆಸಿ ತನಿಖೆಗೆ ಆದೇಶ ನೀಡುವುದಾಗಿ ಹೇಳಿದರು.
ಬಿಜೆಪಿ ಶಾಸಕರ ಅನರ್ಹತೆ ಪ್ರಕರಣದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ ನಂತರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ವಿವರಿಸಿದರು. ಅತೃಪ್ತರ ರೆಸಾರ್ಟ್ ವಾಸ್ತವ್ಯ, ಅಪ್ಪಚ್ಚು ರಂಜನ್ ಜತೆ ದೂರವಾಣಿ ಮಾತುಕತೆ, ಸುರೇಶ್ ಗೌಡ ಮತ್ತು ಶ್ರೀನಿವಾಸ್ ನಡುವಿನ ಸಂಭಾಷಣೆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಆದರೆ ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ನಂತರ ತನಿಖಾ ಸಮಿತಿಯನ್ನು ರಚನೆ ಮಾಡಿ ಸತ್ಯಾಸತ್ಯತೆಯನ್ನು ಅರಿಯಲು ನ್ಯಾಯಮೂರ್ತಿಗಳನ್ನು ನೇಮಿಸಿ ಬಯಲಿಗೆಳೆಯಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಯಾರ ಬಳಿ ಯಾವುದಾದರೂ ಮಾಹಿತಿಗಳಿದ್ದರೆ ಅದನ್ನು ತನಿಖಾ ಸಮಿತಿಗೆ ನೀಡಬಹುದು ಎಂದು ಹೇಳಿದರು.