ಆಡಳಿತಾರೂಢ ಬಿಜೆಪಿಯಲ್ಲಿ ಕಂಡು ಬಂದಿರುವ ತೀವ್ರ ರಾಜಕೀಯ ಬಿಕ್ಕಟ್ಟಿನ ಪ್ರಮುಖ ರೂವಾರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಅಬಕಾರಿ ಸಚಿವ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಬಿಜೆಪಿ ನಾಯಕರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಒತ್ತಡ ಹಾಕುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರು ಭಾಗದ ಶಾಸಕರು ಮತ್ತು ಸಚಿವರು ಬಿಜೆಪಿಯ ಈ ಪರಿಸ್ಥಿತಿಗೆ ಕಾರಣಕರ್ತರಾಗಿರುವ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ತೀವ್ರ ಒತ್ತಡ ಹಾಕಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿ ಶಾಸಕರನ್ನೇ ಎತ್ತಿಕಟ್ಟಿ ಅವರನ್ನು ಚೆನ್ನೈ-ಗೋವಾಕ್ಕೆ ಕರೆದುಕೊಂಡು ಹೋಗಿ ಸರಕಾರಕ್ಕೆ ಇಂತಹ ಪರಿಸ್ಥಿತಿ ಉಂಟಾಗಲು ನೇರವಾಗಿ ರೇಣುಕಾಚಾರ್ಯ ಅವರೇ ಕಾರಣ. ಆದ್ದರಿಂದ ಅವರನ್ನು ಸಂಪುಟದಿಂದ ಕೈಬಿಡುವುದು ತಕ್ಕ ಶಾಸ್ತಿ ಎಂದು ಒತ್ತಡ ಹೇರಿದ್ದಾರೆನ್ನಲಾಗಿದೆ.
ಆದರೂ ತಮ್ಮ ನೆಚ್ಚಿನ ಶಿಷ್ಯನಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಕೈಬಿಡುವುದು ಹೇಗೆ ಎಂಬ ಡೋಲಾಯಮಾನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆನ್ನಲಾಗಿದೆ. ಇವೆಲ್ಲಾ ಒತ್ತಡದ ನಡುವೆ ರೇಣುಕಾಚಾರ್ಯ ಅವರಿಂದ ಅಬಕಾರಿ ಖಾತೆ ಕಿತ್ತುಕೊಂಡು ಗೂಳಿಹಟ್ಟಿ ಶೇಖರ್ ಅವರು ನಿರ್ವಹಿಸಿದ್ದ ಕ್ರೀಡಾ ಮತ್ತು ಯುವಜನ ಖಾತೆಯನ್ನು ನೀಡುವ ಸಾಧ್ಯತೆಗಳಿವೆ ಎಂದು ಮೂಲವೊಂದು ತಿಳಿಸಿದೆ.